Wednesday 21 December 2016

‘ಸದಾಶಿವ ಆಯೋಗ ವರದಿ ತಿರಸ್ಕರಿಸಿ’ (ಮಸ್ಕಿ)

ಮಸ್ಕಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಸದಾಶಿವ ಆಯೋಗ ವರದಿ ವಿರೋಧಿ ಒಕ್ಕೂಟದ ಸದಸ್ಯರು ಬುಧವಾರ ಪ್ರತಿಭಟನಾ ರಾರ‍ಯಲಿ ನಡೆಸಿದರು.
ಪಟ್ಟಣದ ಪ್ರಮುಖ ಬೀದಿಗಳಾದ ತೇರ್‌ ಬಜಾರ್‌, ದೈವದಕಟ್ಟೆ, ಮೇನ್‌ ಬಜಾರ್‌, ಡಾ.ಖಲೀಲ್‌ ಅಹ್ಮದ್‌ ವೃತ್ತದ ಮೂಲಕ ರಾರ‍ಯಲಿ ಹಳೆ ಬಸ್‌ ನಿಲ್ದಾಣ ತಲುಪಿತು. ಪ್ರತಿಭಟನೆಯುದ್ದಕ್ಕೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಶಾಸಕ ಸ್ಥಾನದಿಂದ ವಜಾಗೊಳಿಸಬೇಕು, ಸದಾಶಿವ ಆಯೋಗದ ವರದಿ ವಿರೋಧಿಸಿದ 12 ಶಾಸಕರ ವಿರುದ್ಧ ಪ್ರತಿಭಟನೆ ಮಾಡುವುದು ಸರಿಯಲ್ಲ, ಆಯೋಗದ ವರದಿ ಜಾರಿಯಾದರೆ 99 ಜಾತಿಗಳಿಗೆ ಅನ್ಯಾಯವಾಗುತ್ತದೆ. ಇದನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿದರು.
ನಂತರ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರ ಪ್ರತಿಕೃತಿ ದಹನ ಮಾಡಿ ವಿಶೇಷ ತಹಸೀಲ್ದಾರ್‌ ಅನಿಲಕುಮಾರ ಅರೋಲಿಕರ್‌ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ದುರುಗಪ್ಪ ಚಿಗರಿ, ಶೇಖರಪ್ಪ ಬೆಳಗಲ್‌, ಜೋಸೆಫ್‌ ಮೆದಕಿನಾಳ, ಮಲ್ಲಯ್ಯ ಗುಡಸಲಿ, ಅಮರೇಶ ರಾಥೋಡ್‌, ರಂಗಪ್ಪ ಅರಿಕೇರಿ, ದೇವಣ್ಣ ಜಾಧವ್‌, ಸಾರಪ್ಪ ಬಂಗಾಲಿ, ಮಲ್ಲಯ್ಯ ನಾಗರಾಳ, ರವಿಕುಮಾರ ಚಿಗರಿ, ಮಲ್ಲಯ್ಯ ಚಾವಣಿ, ರಮೇಶ ಗುಡಸಲಿ, ಆನಂದ ಬನಗಲ್‌, ತಿಮ್ಮಣ್ಣ ಗುಡಸಲಿ, ವೀರೇಶ ಬಡಗಿ, ಆಂಜನೇಯ ಆನೆಹೊಸೂರು, ಆನಂದ್‌, ಹುಸೇನಪ್ಪ, ಮುತ್ತಣ್ಣ ಹಸಮಕಲ್‌, ಬಸವರಾಜ ಹಟ್ಟಿ, ದುರುಗಪ್ಪ ಲಿಂಗಸುಗೂರು, ಶಿವರಾಜ ಹಸಮಕಲ್‌ ಇದ್ದರು.

ಸದಾಶಿವ ಆಯೋಗದ ವರದಿ ತಿರಸ್ಕರಿಸಲು ಒತ್ತಾಯ

ಶಿಡ್ಲಘಟ್ಟ: ಮೀಸಲು ಕುರಿತಂತೆ ನ್ಯಾ. ಸದಾಶಿವ ಆಯೋಗವು ನೀಡಿರುವ ವರದಿಯನ್ನು ಯಾವುದೆ ಕಾರಣಕ್ಕೂ ಅನುಷ್ಠಾನಗೊಳಿಸದೆ ತಿರಸ್ಕರಿಸುವಂತೆ ಭೋವಿ ಸಮುದಾಯದ ಮುಖಂಡರು ಸರಕಾರವನ್ನು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸುಮಾರು 35 ಲಕ್ಷ ಮಂದಿ ಬೋವಿ ಸಮುದಾಯದ ಜನಸಂಖ್ಯೆಯಿದ್ದರೂ ಕೇವಲ ಶೇ.1ರಷ್ಟು ಮೀಸಲು ನಿಗದಿಪಡಿಸಿ ನ್ಯಾ. ಸದಾಶಿವ ಆಯೋಗವು ಶಿಫಾರಸು ಮಾಡಿರುವುದು ಅವೈಜ್ಞಾನಿಕವಾಗಿದೆ. ಯಾವುದೆ ಕಾರಣಕ್ಕೂ ಆಯೋಗದ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಳ್ಳಬಾರದೆಂದು ಸರಕಾರವನ್ನು ಆಗ್ರಹಿಸಿದರು.

ಆಧುನಿಕ ಕಾಲದಲ್ಲೂ ಸಮುದಾಯದ ಅರ್ಧ ಮಂದಿ ಈಗಲೂ ಊರಿಂದ ಊರಿಗೆ ಅಲೆದಾಡಿಕೊಂಡು ಕಲ್ಲು ಬಂಡೆಗಳನ್ನು ಹೊಡೆದು ಕಲ್ಲು ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಅಲೆಮಾರಿ ಬದುಕು ನಡೆಸುತ್ತಿರುವ ಬಹುತೇಕ ಮಂದಿ ತಾವೂ ಶಿಕ್ಷಣ ಪಡೆದಿಲ್ಲ. ಜತೆಗೆ ತಮ್ಮ ಮಕ್ಕಳಿಗೂ ಶಿಕ್ಷಣ ಕೊಡಿಸಿಲ್ಲ.


ಇದರಿಂದಾಗಿ ಭೋವಿ ಸಮುದಾಯವು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಸದಾಶಿವ ಆಯೋಗದ ಶಿಫಾರಸುಗಳೇನಾದರೂ ಅನುಷ್ಠಾನಗೊಂಡರೆ ಸಮುದಾಯದವರು ಯಾವುದೆ ಕಾರಣಕ್ಕೂ ಅಭಿವೃದ್ಧಿ ಹೊಂದಲು ಅವಕಾಶ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ಒಳಮೀಸಲನ್ನು ರದ್ದುಪಡಿಸಿದ್ದರೂ ಕೂಡ ಸದಾಶಿವ ಆಯೋಗವು ನಮ್ಮ ಸಮುದಾಯಕ್ಕೆ ಶೇ.1ರಷ್ಟು ಒಳಮೀಸಲು ನೀಡುವಂತೆ ಶಿಫಾರಸು ಮಾಡುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತಾಗಿದೆ. ಅಲ್ಲದೆ ಮತ್ತೊಂದು ಕಡೆ ಸಮುದಾಯವನ್ನು ಎಲ್ಲಾ ರೀತಿಯಿಂದಲೂ ತುಳಿಯಲು ಉದ್ದೇಶಪೂರ್ವಕವಾಗಿ ಇಂತಹ ಶಿಫಾರಸನ್ನು ಮಾಡಿದೆ ಎಂದು ದೂರಿದರು.

ಹಾಗಾಗಿ ಯಾವುದೆ ಕಾರಣಕ್ಕೂ ಸದಾಶಿವ ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬೋವಿ ಸಮುದಾಯದ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಸಿದ್ದಾರೆ.

ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡಿ ಅವೈಜ್ಞಾನಿಕ ಹಾಗೂ ಭೋವಿ ಸಮಾಜದ ಅಭಿವೃದ್ಧಿಗೆ ಮಾರಕವಾದ ಸದಾಶಿವ ಆಯೋಗದ ವರದಿ ಕುರಿತು ಸಮುದಾಯದವರಲ್ಲಿ ಅರಿವು ಮೂಡಿಸುವ ಕೆಲಸ ನಡೆಯುತ್ತಿದ್ದು ವರದಿಯನ್ನು ತಿರಸ್ಕರಿಸುವಂತೆ ಸರಕಾರದ ಮೇಲೆ ಒತ್ತಡ ಹಾಕಲು ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದರು.

ಭೋವಿ ಸಮುದಾಯದ ಜಿಲ್ಲಾಧ್ಯಕ್ಷ ಜಿ.ಎಚ್. ಮುನಿಯಪ್ಪ, ಕಾರ್ಯಾಧ್ಯಕ್ಷ ಪಿ.ಡಿ. ವೆಂಕಟರಾಮ್, ಜಿಲ್ಲಾ ಉಪಾಧ್ಯಕ್ಷ ಎಂ.ಶ್ರೀನಿವಾಸ್, ಎನ್.ಜಯರಾಂ, ಖಜಾಂಚಿ ಎಲ್.ಮೂರ್ತಿ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಚಿಕ್ಕನರಸಿಂಹಪ್ಪ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ವಿ.ಕೆ. ಮೂರ್ತಿ, ಮುಖಂಡರಾದ ಬ್ಯಾಟರಾಯಪ್ಪ ಹಾಜರಿದ್ದರು.


ವಿಕ ಸುದ್ದಿಲೋಕ| Updated: Jul 10, 2012,

ಸದಾಶಿವ ಆಯೋಗ ವರದಿ ತಿರಸ್ಕಾರಕ್ಕೆ ಆಗ್ರಹ (ತರೀಕೆರೆ)

ತರೀಕೆರೆ: ನ್ಯಾ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕ ಮತ್ತು ಅಸಹನೀಯ, ಈ ವರದಿಯನ್ನು ಸರಕಾರ ತಿರಸ್ಕರಿಸಬೇಕು ಎಂದು ಬಂಜಾರ ಸೇವಾಲಾಲ್ ಸೇನೆ ಜಿಲ್ಲಾಧ್ಯಕ್ಷ ವಿ.ಶೇಖರ್‌ನಾಯ್ಕ ಹೇಳಿದರು. 

ಪಟ್ಟಣದಲ್ಲಿ ಬಂಜಾರ ಸೇವಾಲಾಲ್ ಸೇನೆ, ಬಂಜಾರ ಸೇವಾಲಾಲ್ ಯುವಸೇನೆ, ಸದಾಶಿವ ಆಯೋಗ ವರದಿ ವಿರುದ್ದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಈ ವರದಿಯಲ್ಲಿನ ಅಂಶಗಳು ಜನಾಂಗದ ಮಧ್ಯೆ ಜಗಳವನ್ನು ತರುವ ಮತ್ತು ಒಡೆದು ಆಳುವ ನೀತಿ ಅನುಸರಿಸುವಂತಿದೆ ಎಂದು ಆರೋಪಿಸಿದರು. ಜನಾಂಗದ ಸುಮಾರು ಪಂಗಡಗಳಿಗೆ ಕೇವಲ ಶೇ.3ರಷ್ಟು ಮೀಸಲಾತಿ ನೀಡಿ, ಒಂದೆರಡು ಪಂಗಡಗಳಿಗೆ 5ರಿಂದ 6ರಷ್ಟು ಮೀಸಲಾತಿ ನೀಡಿ ತಾರತಮ್ಯ ಧೋರಣೆ ಅನುಸರಿಸಲಾಗಿದ್ದು, ಲಕ್ಷಾಂತರ ಬಂಜಾರರಿಗೆ ಈ ವರದಿ ಮರಣ ಶಾಸನವಾಗಿದೆ ಎಂದು ಹೇಳಿದರು. 

ಬಂಜಾರ್ ಸೇವಾಲಾಲ್ ಸೇನೆ ಅಧ್ಯಕ್ಷ ಎಚ್.ಶಿವಶಂಕರನಾಯ್ಕ ಮಾತನಾಡಿ, ರಾಜ್ಯದಲ್ಲಿ ಬಂಜಾರ ಜನಾಂಗಕ್ಕೆ ಸೇರಿದ ಸುಮಾರು 45 ರಿಂದ 50 ಲಕ್ಷ ಜನರಿದ್ದು, ಅತಿ ಬಡತನದಿಂದ ಉತ್ತರ ಕರ್ನಾಟಕದ ಹಲವೆಡೆ ಮಕ್ಕಳನ್ನು ಮಾರಾಟ ಮಾಡುವ ಸ್ಥಿತಿಯಲ್ಲಿದ್ದಾರೆ. ಬಂಜಾರರಿಗೆ ಸರಿಯಾದ ಮತ್ತು ಸೂಕ್ತ ಮೀಸಲು ಅವಶ್ಯಕತೆ ಇದೆ ಎಂದು ಹೇಳಿದರು. ಬಂಜಾರ ಜನಾಂಗದ ಜನರು ಈಗಲೂ ಕಾಫಿ, ಅಡಕೆ ತೋಟಗಳಲ್ಲಿ, ಹೊಲಗದ್ದೆಗಳಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು ಅತ್ಯಂತ ಹಿಂದುಳಿದಿರುವ ಈ ಜಾತಿಗೆ ಮೀಸಲಾತಿ ತಾರತಮ್ಯ ಸರಿಯಲ್ಲ. ಸರಕಾರ ಸಂಪೂರ್ಣವಾಗಿ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಹೇಳಿದರು. 


ಸಮಾಜದ ಮುಖಂಡ ಸೋಮ್ಲಾನಾಯ್ಕ ಮಾತನಾಡಿ, ಈ ವರದಿಯಿಂದ ಬಂಜಾರರಿಗೆ ಅನ್ಯಾಯವಾಗುತ್ತದೆ. ಮುಖ್ಯವಾಹಿನಿಗೆ ಬಾರದ ಈ ಜನಾಂಗ ಈ ವರದಿಯಿಂದ ಶೋಷಣೆಗೊಳಗಾಗುತ್ತದೆ ಎಂದು ಆರೋಪಿಸಿದರು. ಸರಕಾರ ಈ ವರದಿಯನ್ನು ಒಪ್ಪಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. 

ಇದಕ್ಕೂ ಮೊದಲು ಸಮಾಜದ ಪ್ರಮುಖರು ಪಟ್ಟಣದ ಸಾಲಮಾರದಮ್ಮ ದೇವಸ್ಥಾನದಿಂದ ತಾಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಶಿವಕುಮಾರ್‌ಗೆ ಮನವಿ ಸಲ್ಲಿಸಿದರು. 

ತಾಲೂಕು ಪಂಚಾಯಿತಿ ಸದಸ್ಯೆ ಪಾರ್ವತಿಬಾಯಿ, ಚಟ್ನಹಳ್ಳಿ ಮಂಜಾನಾಯ್ಕ, ಶಂಕರನಾಯ್ಕ, ಬೇಲೂರ್ ನಾಯ್ಕ, ದಾಸೋನಾಯ್ಕ, ಸುರೇಂದ್ರನಾಯ್ಕ, ದೇವೇಂದ್ರನಾಯ್ಕ, ಅಣ್ಣಪ್ಪನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.  



ವಿಕ ಸುದ್ದಿಲೋಕ| Updated: Apr 17, 2015,

ಸದಾಶಿವ ವರದಿ ಕೈಬಿಡಿ (ಬಳ್ಳಾರಿ)

ಬಳ್ಳಾರಿ: ಪರಿಶಿಷ್ಟ ಜಾತಿಗಳ ಒಳಮೀಸಲಿಗೆ ಶಿಫಾರಸುಮಾಡಿರುವ ನ್ಯಾ.ಎ.ಜೆ. ಸದಾಶಿವ ವಿಚಾರಣಾ ಆಯೋಗದ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಂಜಾರ್(ಲಂಬಾಣಿ)ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಜನರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದಿಂದ ಹೊರಟ ಪ್ರತಿಭಟನಾಕಾರರು ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿದ ನೂರಾರು ಬಂಜಾರ ಸಮಾಜದ ಮಹಿಳೆಯರು ಆಯೋಗದ ವರದಿಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವವಹಿಸಿದ್ದ ಬಂಜಾರ ಸಮಾಜದ ಸರ್‌ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವ ನ್ಯಾ.ಎ.ಜೆ. ಸದಾಶಿವ ವಿಚಾರಣಾ ಆಯೋಗವು ಪರಿಶಿಷ್ಟ ಜಾತಿಗಳಲ್ಲಿ ನ್ಯಾಯ ಕಲ್ಪಿಸುವ ಬದಲಾಗಿ ಬಂಜಾರ ಜನಾಂಗಕ್ಕೆ ಅನ್ಯಾಯ ಮಾಡಿದೆ. ಇದೊಂದು ಪೂರ್ವಗ್ರಹ ಪೀಡಿತ ವರದಿಯಾಗಿದೆ ಎಂದು ದೂರಿದರು.


ಪರಿಶಿಷ್ಟರಲ್ಲೇ ಉಪ ಜಾತಿಯ ಜನರ ಹಿತಾಸಕ್ತಿಗೆ ಸಚಿವರಾದ ನಾರಾಯಣಸ್ವಾಮಿ ಮತ್ತು ಗೋವಿಂದಕಾರಜೋಳರನ್ನು ಮುಂದಿಟ್ಟುಕೊಂಡು ನ್ಯಾ.ಎ.ಜೆ. ಸದಾಶಿವರು ಮುಖ್ಯಮಂತ್ರಿಗೆ ವರದಿ ಸಲ್ಲಿಸಿರುವುದನ್ನು ನೋಡಿದರೆ ರಾಜಕೀಯ ಒತ್ತಡಕ್ಕೆ ಮಣಿದು ಉಪಜಾತಿಗಳಿಗೆ ಹೆಚ್ಚು ಅನುಕೂಲವಾಗುವಂತೆ ಸಿದ್ಧಪಡಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸರಕಾರ ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನ್ಯಾ.ಎ.ಜೆ. ಸದಾಶಿವ ವಿಚಾರಣಾ ಆಯೋಗದ ವರದಿಯ ಅವೈಜ್ಞಾನಿಕ ಹಾಗೂ ಅಸಂವಿಧಾನಿಕ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಪರಿಶಿಷ್ಟರಲ್ಲಿ ಒಡಕು ಹುಟ್ಟಿಸುವ ಒಳ ಮೀಸಲಾತಿಯನ್ನು ಕೈಬಿಡಬೇಕು ಹಾಗೂ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ನೀಡಿರುವ ಪರಿಶಿಷ್ಟರ ಮೀಸಲು ಯಥಾ ಸ್ಥಿತಿಯಲ್ಲಿ ಮುಂದವರಿಸಬೇಕು ಎಂದು ಒತ್ತಾಯಿಸಿದರು. ಆ ನಂತರ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.

ಎಲ್. ಮೀಟ್ಯಾ ನಾಯ್ಕ, ಡಾ.ಸುರೇಶ್ ನಾಯ್ಕ, ಚಂದ್ರನಾಯ್ಕ, ಧಾಮು ನಾಯ್ಕ, ಸೇಟು ನಾಯ್ಕ, ಸ್ವಾಮಿ ನಾಯ್ಕ, ಶಂಕರ್ ನಾಯ್ಕ, ರಾಮು, ಬಾಬು, ಶಂಕರ್, ಸ್ವಾಮಿ ನಾಯ್ಕ ಇತರರಿದ್ದರು. ಜಿಲ್ಲೆಯ ನಾನಾ ತಾಲೂಕುಗಳಿಂದ 800ಕ್ಕೂ ಹೆಚ್ಚು ಲಂಬಾಣಿ ಜನಾಂಗದ ಮಹಿಳೆಯರು, ಪುರುಷರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 




ವಿಕ ಸುದ್ದಿಲೋಕ| Updated: Jul 10, 2012

ನ್ಯಾ.ಸದಾಶಿವ ಆಯೋಗ ವರದಿ ತಿರಸ್ಕರಿಸಲು ಆಗ್ರಹ (ಕಲಬುರಗಿ)

ಕಲಬುರಗಿ: ಒಳ ಮೀಸಲಾತಿ ಕಲ್ಪಿಸುವ ನ್ಯಾ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿರುವುದನ್ನು ತಕ್ಷಣವೇ ಅದನ್ನು ತಿರಸ್ಕರಿಸಬೇಕು ಎಂದು ಮಾಜಿ ಮಂತ್ರಿ ರೇವೂ ನಾಯಕ ಬೆಳಮಗಿ, ಸುಭಾಷ ರಾಠೋಡ ಮತ್ತಿತರ ಪರಿಶಿಷ್ಟ ಜಾತಿಗಳ ಸಮುದಾಯದ ನಾಯಕರು ಒಕ್ಕೋರಲಿನಿಂದ ಸರಕಾರಕ್ಕೆ ಆಗ್ರಹಿಸಿದ್ದಾರೆ. 

ಲಂಬಾಣಿ ಸಮುದಾಯ ಮುಖಂಡರಾದ ನಾಮದೇವ ರಾಠೋಡ, ಭೋವಿ ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನ ಕುಸ್ತಿ, ಭಜಂತ್ರಿ ಸಮುದಾಯದ ಬಿ.ಬಿ.ಭಜಂತ್ರಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರೊಂದಿಗೆ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಸದಾಶಿವ ಆಯೋಗದ ವರದಿಯಲ್ಲಿ ಏನಿದೆ ಎಂಬುದು ಜನರಿಗೆ ಸರಿಯಾಗಿ ಗೊತ್ತಿಲ್ಲ. ಒಂದೇ ಸಮುದಾಯವನ್ನು ಕೇಂದ್ರೀಕೃತಗೊಳಿಸಿ ಸಿದ್ಧಪಡಿಸಲಾಗಿದೆ. ಎಲ್ಲರನ್ನು ಕತ್ತಲಲ್ಲಿಟ್ಟು ವರದಿಯನ್ನು ಜಾರಿಗೊಳಿಸಲು ಸರಕಾರ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು. 

2001ರ ಗಣತಿಯಂತೆ ರಾಜ್ಯದಲ್ಲಿ ಭೋವಿ ಸಮಾಜದವರು 9.48 ಲಕ್ಷ ಜನಸಂಖ್ಯೆ ಇದೆ, ಆದರೆ 2011ರಲ್ಲಿ ಬಂದ ಸದಾಶಿವ ಆಯೋಗದ ವರದಿಯಲ್ಲಿ ಹೇಳುವಂತೆ ಈ ಸಮಾಜದ ಜನಸಂಖ್ಯೆ 9.48 ಲಕ್ಷ. ಹತ್ತು ವರ್ಷಗಳಲ್ಲಿ ಜನಸಂಖ್ಯೆ ಹೇಗೆ ಕಡಿಮೆಯಾಗುತ್ತದೆ ಎಂದು ಪ್ರಶ್ನಿಸಿದರು. 


ಲಂಬಾಣಿ, ಭೋವಿ, ಕೊರಮ, ಕೊರಚ, ಭಜಂತ್ರಿ ಇನ್ನಿತರರ ಸಮಾಜಗಳನ್ನು ಮೀಸಲು ಪಟ್ಟಿಯಿಂದ ದೂರವಿಡುವ ಉದ್ದೇಶದಿಂದಲೇ ಈ ವರದಿಯನ್ನು ಸಿದ್ಧಪಡಿಸಿದಂತಿದೆ. ಎಲ್ಲಿಯೋ ಕುಳಿತುಕೊಂಡು, ಯಾವುದೋ ಒತ್ತಡಕ್ಕೆ ಮಣಿದು ಇಲ್ಲದ ಅಂಕಿ ಸಂಖ್ಯೆಗಳನ್ನು ಆಯೋಗ ತನ್ನ ವರದಿಯಲ್ಲಿ ನೀಡಿದೆ ಎಂದು ಗಂಭೀರವಾಗಿ ಆರೋಪಿಸಿದರು. ಅಲ್ಲದೆ ಈ ಸಮಾಜದವರು ಪರಿಶಿಷ್ಟರಲ್ಲಿಯೇ ಪ್ರಬಲರು, ಅಶ್ಪೃಶ್ಯತೆಯಿಂದ ದೂರವಿದ್ದಾರೆ ಎಂದು ಹೇಳಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು. 




ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳು ಇದನ್ನು ಜಾರಿಗೊಳಿಸಲು ಮುಂದಾಗಬಾರದು, ಗೌಪ್ಯವಾಗಿರುವ ವರದಿಯನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ, ಚರ್ಚೆ ನಡೆಸಿದ ಬಳಿಕ ಅದರಲ್ಲಿರುವ ಅವೈಜ್ಞಾನಿಕ ಅಂಶಗಳನ್ನು ತೆಗೆದು ಹಾಕಿದ ಬಳಿಕವೇ ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಸುಭಾಷ ರಾಠೋಡ ಮತ್ತು ನಾಮದೇವ ರಾಠೋಡ ಆಗ್ರಹಿಸಿದರು. 

ಯಾವುದೇ ಕಾರಣಕ್ಕೂ ವರದಿ ಜಾರಿಗೊಳಿಸಬಾರದು, ಒಂದು ವೇಳೆ ನಮ್ಮ ಭಾವನೆ ಧಿಕ್ಕರಿಸಿ, ಯಾವುದೋ ಒತ್ತಡಕ್ಕೆ ಮಣಿದು ಜಾರಿಗೆ ತರಲು ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ರಾಜ್ಯದೆಲ್ಲಡೆ ಉಗ್ರ ಸ್ವರೂಪದ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು. 

ಪತ್ರಿಕಾಗೋಷ್ಠಿಯಲ್ಲಿ ಅನಿಲ್ ಜಾಧವ, ಭೀಮರಾವ ಭಜಂತ್ರಿ, ರಾಮಚಂದ್ರ ಜಾಧವ, ವಿಠ್ಠಲ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರಿದ್ದರು. 

ಜಾತಿ ಗಣತಿ ಅಂಕಿಗಳನ್ನು ಪಡೆದುಕೊಳ್ಳಿ 

ಸರಕಾರ ಹಿಂದುಳಿದ ಆಯೋಗದ ಮೂಲಕ ಜಾತಿ ಗಣತಿಯನ್ನು ನಡೆಸುತ್ತಿದ್ದು, ಅಲ್ಲಿ ಬರುವ ಅಂಕಿ ಸಂಖ್ಯೆಗಳನ್ನು ಆಧಾರವಾಗಿಟ್ಟುಕೊಂಡು, ಈಗಿರುವ ನ್ಯಾ.ಸದಾಶಿವ ಆಯೋಗದಲ್ಲಿನ ಅವೈಜ್ಞಾನಿಕ ನಿರ್ಧಾರಗಳನ್ನು ತೊಡೆದು ಹಾಕಬೇಕು ಎಂದು ಮಾಜಿ ಮಂತ್ರಿ ರೇವೂ ನಾಯಕ ಬೆಳಮಗಿ ಆಗ್ರಹಿಸಿದರು. 

ವರದಿಯ ಬಳಿಕ ಅಂಕಿ ಸಂಖ್ಯೆಗಳನ್ನು ಇಟ್ಟುಕೊಂಡು, ತಜ್ಞರೊಂದಿಗೆ ಸಮಾಲೋಚನೆ ನಡೆಸಿ ವರದಿಯನ್ನು ವೈಜ್ಞಾನಿಕ ರೂಪ ನೀಡಬೇಕು ಎಂದು ಒತ್ತಾಯಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿದಂತೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಅದು ಬಿಟ್ಟು ಹೀಗೆ ತಾರತಮ್ಯ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ತಿಳಿಸಿದರು. 



ವಿಕ ಸುದ್ದಿಲೋಕ| Updated: Jul 10, 2012,

ಸದಾಶಿವ ಆಯೋಗದ ವರದಿ ತಿರಸ್ಕರಿಸಲು ಒತ್ತಾಯ (ಕೊಪ್ಪಳ)

ಕೊಪ್ಪಳ ; ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ, ನ್ಯಾ.ಸದಾಶಿವ ಆಯೋಗ ವರದಿ ವಿರೋಧಿ ಹೋರಾಟ ಒಕ್ಕೂಟದ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು. 

ನ್ಯಾ.ಎ.ಜೆ.ಸದಾಶಿವ ಆಯೋಗವು ಒಂದೇ ವರ್ಷದಲ್ಲಿ ತರಾತುರಿ ಸಿದ್ಧಪಡಿಸಿ ವರದಿ ಸಲ್ಲಿಸಿದ್ದು, ವರದಿ ಹಿಂದೆ ಹಲವಾರು ಪಟ್ಟಭದ್ರಹಿತಾಸಕ್ತಿಗಳ ಕೈವಾಡ ಇದೆ ಎಂಬುದು ಮೇಲ್ನೋಟಕ್ಕೆ ಸಾಬಿತಾಗಿದೆ. ವರದಿ ಸತ್ಯಕ್ಕೆ ದೂರವಾಗಿದೆ. ಈ ವರದಿ ಅಂಗೀಕರಿಸದೆ ರಾಜ್ಯಪಾಲರು ಹಾಗೂ ಸಿಎಂ ಕೂಡಲೇ ಅದನ್ನು ತಿರಸ್ಕರಿಸಬೇಕು ಎಂದರು. 

ಎಚ್ಚರಿಕೆ: ವರದಿ ಅವೈಜ್ಞಾನಿಕ, ಅಸಂವಿಧಾನಿಕ ಹಾಗೂ ರಾಜಕೀಯ ಪ್ರೇರಿತವಾಗಿದೆ. ಆಯೋಗದ ಶಿಫಾರಸುಗಳು, ಪರಿಶಿಷ್ಟ ಜಾತಿ, ಉಪಜಾತಿಗಳಲ್ಲಿ ವೈಷಮ್ಯ ಹುಟ್ಟಿಸಿ ದಲಿತ ಸಮುದಾಯ ಒಡೆದಾಳುವ ನೀತಿಯಿಂದ ಕೂಡಿದ್ದು, ವರದಿಯ ಶಿಫಾರಸಿಗೆ ಯಾವುದೇ ಮಹತ್ವ ನೀಡಬಾರದು. ಸುಪ್ರಿಂಕೋರ್ಟ್, ಹೈಕೋರ್ಟ್, ಜಿಲ್ಲಾ ಕೋರ್ಟ್‌ಗಳಲ್ಲಿ ನ್ಯಾಯಾಧೀಶ ಸ್ಥಾನದಲ್ಲಿ ಐಎಎಸ್,ಐಪಿಎಸ್, ಐಎಫ್‌ಎಸ್ ಸೇವೆಗಳಲ್ಲಿ ಸ್ಪೃಶ್ಯರೆಂದು ಪರಿಗಣಿಸಲ್ಪಟ್ಟಿರುವ ವಡ್ಡರ, ಲಂಬಾಣಿ, ಕೊರವ,ಕೊರಚ,ಸುಡುಗಾಡು ಸಿದ್ಧ ಜನಾಂಗಕ್ಕೆ ಸೇರಿದವರು ಕಂಡುಬರುವುದಿಲ್ಲ. ರಾಜ್ಯಗಳಲ್ಲಿ ಕ್ಲಾಸ್-1 ಕ್ಲಾಸ್-2 ಸೇವೆಗಳಲ್ಲಿ ಬೆರಳೆಣಿಕೆ ಈ ಜನಾಂಗದವರಿಲ್ಲ. ಹೀಗಿರುವಾಗ ನ್ಯಾ.ಸದಾಶಿವ ವರದಿ, ಸುಳ್ಳಿನ ಕಂತೆಯಂತೆಯಾಗಿದೆ. ರಾಜ್ಯ ಸರಕಾರ ಈ ವರದಿ ಅಂಗೀಕರಿಸಲು ಮುಂದಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 


ನ್ಯಾ.ಸದಾಶಿವ ಆಯೋಗ ವರದಿ ವಿರೋಧಿ ಹೋರಾಟ ಒಕ್ಕೂಟದ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಭರತ್ ನಾಯಕ್, ಜಿಲ್ಲಾ ಭೋವಿ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಭೋವಿ, ಜಿಲ್ಲಾ ಭಜಂತ್ರಿ ಕೊರವ ಸಮಾಜದ ಜಿಲ್ಲಾಧ್ಯಕ್ಷ ಮಹೇಶ ಭಜಂತ್ರಿ, ಮುಖಂಡರಾದ ರೇವಣಪ್ಪ ಭೋವಿ, ನಾಗಪ್ಪ ಭೋವಿ, ರಾಮಕಷ್ಣ ರಾಥೋಡ್, ಸುರೇಶ ಭೋವಿ, ಭೀಮಜ್ಜ ಹಳ್ಳಿ, ದೇವಪ್ಪ ಭಾಗ್ಯನಗರ, ಶೇಖರಪ್ಪ ಲಂಬಾಣಿ, ಹುಲುಗಪ್ಪ ಭಜಂತ್ರಿ, ಹನುಮೇಶ,ಎಲ್.ಶಿವಪ್ಪ, ಸೇರಿದಂತೆ ಇತರರು ಇದ್ದರು.  


ವಿಕ ಸುದ್ದಿಲೋಕ| Updated: Nov 6, 2015,

ಒಳ ಮೀಸಲು : ಸದಾಶಿವ ಆಯೋಗ ವರದಿ ರದ್ದತಿಗೆ ಆಗ್ರಹ (ಶಿವಮೊಗ್ಗ)

ಶಿವಮೊಗ್ಗ: ಪರಿಶಿಷ್ಟ ಸಮುದಾಯದಲ್ಲಿ ಒಳ ಮೀಸಲಾತಿ ನೀಡುವಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ರದ್ದುಪಡಿಸುವಂತೆ ವರದಿಯ ವಿರೋಧಿ ಒಕ್ಕೂಟದ ಆಗ್ರಹಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಹಾಗೂ ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಭೋಜಾನಾಯ್ಕ, ನ್ಯಾಯಮೂರ್ತಿಗಳು ಆಯೋಗ ರಚನೆಯ ಮೂಲ ಉದ್ದೇಶವನ್ನೇ ಬದಿಗೊತ್ತಿ ತಮಗೆ ಸಂಬಂಧಿಸಿರದ ವಿಷಯದ ವರದಿ ಸಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏಕವ್ಯಕ್ತಿ ಆಯೋಗ ರಚನೆ ಸಂದರ್ಭದಲ್ಲಿ ಸರಕಾರ ಆಯೋಗಕ್ಕೆ ಪರಿಶಿಷ್ಟರ ಕಲ್ಯಾಣಕ್ಕೆ ರೂಪಿಸಿರುವ ಕಾರ್ಯಕ್ರಮ ಆ ಸಮುದಾಯದ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿದೆಯೋ ಇಲ್ಲವೋ ಎಂಬುದನ್ನು, ಒಂದು ವೇಳೆ ತಲುಪಿಲ್ಲದಿದ್ದರೆ ಅದಕ್ಕೆ ಕಾರಣ ಹುಡುಕುವಂತೆ ಮಿತಿ ನಿರ್ದಿಷ್ಟಪಡಿಸಿತ್ತು. ಆದರೆ ನ್ಯಾಯಮೂರ್ತಿಗಳು ತಮ್ಮ ಮಿತಿಮೀರಿ ಪರಿಶಿಷ್ಟರಲ್ಲಿ ಒಳಮೀಸಲಾತಿಯನ್ನು ಶೇಕಡವಾರು ನೀಡುವಂತೆ ಶಿಫಾರಸು ಮಾಡಿ ಅವೈಜ್ಞಾನಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿರುವುದು ಬಹುಪಾಲು ಪರಿಶಿಷ್ಟರಿಗೆ ಆಘಾತ ಉಂಟು ಮಾಡಿದೆ ಎಂದರು.


ಮಾಧ್ಯಮಗಳಲ್ಲಿ ವರದಿಯಾದಂತೆ ಪರಿಶಿಷ್ಟರಿಗೆ ಮೀಸಲಿರುವ ಶೇ.15 ರಷ್ಟು ಸೌಲಭ್ಯದಲ್ಲಿ ಬಲಗೈಗೆ ಶೇ.6, ಎಡಗೈಗೆ ಶೇ.5 ಹಾಗೂ ಇತರೆ ಪರಿಶಿಷ್ಟರಿಗೆ ಶೇ. 1 ಹಾಗೂ ಸ್ಪರ್ಶರಿಗೆ ಶೇ. 3ರ ಪ್ರಮಾಣದಲ್ಲಿ ಮೀಸಲು ವರ್ಗಿಕರಿಸುವಂತೆ 2 ಸಮುದಾಯಕ್ಕೆ ಒಟ್ಟು ಶೇ.11 ಮತ್ತು ಇನ್ನುಳಿದ 99 ಜಾತಿಗೆ ಶೇ. 4ರಷ್ಟು ನಿಗದಿಪಡಿಸಲಾಗಿದೆ.

ವರದಿಯ ರಾಜಕೀಯ ಪ್ರೇರಿತ ಎಂದು ಕಂಡುಬರುತ್ತದೆ. ರಾಜ್ಯದಲ್ಲಿ ಬಂಜಾರ ಸಮಾಜ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ . ಅನಕ್ಷರತೆ, ಬಡತನದಿಂದ ಮಕ್ಕಳನ್ನು ಸಾಕಲಾಗದೆ ಮಕ್ಕಳನ್ನೇ ಮಾರಿದ ಘಟನೆಗಳಿವೆ. ಅದೇ ರೀತಿ ಕಲ್ಲು ಒಡೆಯುವ ಮತ್ತು ನೆಲ ಅಗೆದು ಜೀವಿಸುತ್ತಿರುವ ಬೋವಿ, ಕೊರಚ, ಕೊರಮ ಸಮುದಾಯದಲ್ಲಿ ಅತ್ಯಂತ ಬಡವರಿದ್ದಾರೆ. ಮೇಲ್ವರ್ಗದಿಂದ ಬಹಳಷ್ಟು ದೂರ ಇರುವ ಈ ಸಮುದಾಯವರನ್ನು ಸ್ಪರ್ಶರು ಎಂದು ಆಯೋಗ ಪರಿಗಣಿಸಿದಂತಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ದುರ್ಬಲವಾಗಿರುವ ಇಂತಹ ಅನೇಕ ಸಮುದಾಯಗಳನ್ನು ಪರಿಶಿಷ್ಟರ ಸೌಲಭ್ಯದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದು ದೂರಿದರು.

ರಾಜ್ಯದಲ್ಲಿ 2 ಕೋಟಿ ಪರಿಶಿಷ್ಟರಿದ್ದಾರೆ ಎಂದು ಸರಕಾರವೇ ಘೋಷಿಸಿದೆ. ಆದರೆ ಆಯೋಗ ಕೇವಲ 96 ಲಕ್ಷ ಜನರನ್ನು ಸಂಪರ್ಕಿಸಿ ವರದಿ ಸಿದ್ಧಪಡಿಸಿದೆ ಎಂದು ಆಯೋಗ ಹೇಳಿಕೊಂಡಿದೆ. ಆದರೆ ಇದೊಂದು ರಾಜಕೀಯ ಪ್ರೇರಿತ ವರದಿಯಾಗಿದ್ದು ಅದನ್ನು ರದ್ದುಪಡಿಸಬೇಕು. ಜನಸಂಖ್ಯೆ, ಸಾಮಾಜಿಕ ಸ್ಥಿತಿಗತಿಯನ್ನು ಮಾನದಂಡವಾಗಿಟ್ಟುಕೊಂಡು ಹೊಸ ಆಯೋಗ ರಚಿಸಬೇಕು ಎಂದು ಒತ್ತಾಯಿಸಿದರು.

ಬೋವಿ ಸಮಾಜದ ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ, ಜಿಲ್ಲಾ ಬಂಜಾರ ಸಂಘದ ಮಾಜಿ ಅಧ್ಯಕ್ಷ ನಾನ್ಯಾನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಾನಾಯ್ಕ, ಎಪಿಎಂಸಿ ಸದಸ್ಯ ಮಂಡೇನಕೊಪ್ಪ ದೇವರಾಜ, ಪರಿಶಿಷ್ಟ ಪ್ರಮುಖರಾದ ಧೀರರಾಜ್, ಜಗದೀಶ ನಾಯ್ಕ ಗೋಷ್ಠಿಯಲ್ಲಿದ್ದರು.


Updated: Jun 29, 2012