Wednesday, 21 December 2016

‘ಸದಾಶಿವ ಆಯೋಗ ವರದಿ ತಿರಸ್ಕರಿಸಿ’ (ಮಸ್ಕಿ)

ಮಸ್ಕಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಸದಾಶಿವ ಆಯೋಗ ವರದಿ ವಿರೋಧಿ ಒಕ್ಕೂಟದ ಸದಸ್ಯರು ಬುಧವಾರ ಪ್ರತಿಭಟನಾ ರಾರ‍ಯಲಿ ನಡೆಸಿದರು.
ಪಟ್ಟಣದ ಪ್ರಮುಖ ಬೀದಿಗಳಾದ ತೇರ್‌ ಬಜಾರ್‌, ದೈವದಕಟ್ಟೆ, ಮೇನ್‌ ಬಜಾರ್‌, ಡಾ.ಖಲೀಲ್‌ ಅಹ್ಮದ್‌ ವೃತ್ತದ ಮೂಲಕ ರಾರ‍ಯಲಿ ಹಳೆ ಬಸ್‌ ನಿಲ್ದಾಣ ತಲುಪಿತು. ಪ್ರತಿಭಟನೆಯುದ್ದಕ್ಕೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಶಾಸಕ ಸ್ಥಾನದಿಂದ ವಜಾಗೊಳಿಸಬೇಕು, ಸದಾಶಿವ ಆಯೋಗದ ವರದಿ ವಿರೋಧಿಸಿದ 12 ಶಾಸಕರ ವಿರುದ್ಧ ಪ್ರತಿಭಟನೆ ಮಾಡುವುದು ಸರಿಯಲ್ಲ, ಆಯೋಗದ ವರದಿ ಜಾರಿಯಾದರೆ 99 ಜಾತಿಗಳಿಗೆ ಅನ್ಯಾಯವಾಗುತ್ತದೆ. ಇದನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿದರು.
ನಂತರ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರ ಪ್ರತಿಕೃತಿ ದಹನ ಮಾಡಿ ವಿಶೇಷ ತಹಸೀಲ್ದಾರ್‌ ಅನಿಲಕುಮಾರ ಅರೋಲಿಕರ್‌ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ದುರುಗಪ್ಪ ಚಿಗರಿ, ಶೇಖರಪ್ಪ ಬೆಳಗಲ್‌, ಜೋಸೆಫ್‌ ಮೆದಕಿನಾಳ, ಮಲ್ಲಯ್ಯ ಗುಡಸಲಿ, ಅಮರೇಶ ರಾಥೋಡ್‌, ರಂಗಪ್ಪ ಅರಿಕೇರಿ, ದೇವಣ್ಣ ಜಾಧವ್‌, ಸಾರಪ್ಪ ಬಂಗಾಲಿ, ಮಲ್ಲಯ್ಯ ನಾಗರಾಳ, ರವಿಕುಮಾರ ಚಿಗರಿ, ಮಲ್ಲಯ್ಯ ಚಾವಣಿ, ರಮೇಶ ಗುಡಸಲಿ, ಆನಂದ ಬನಗಲ್‌, ತಿಮ್ಮಣ್ಣ ಗುಡಸಲಿ, ವೀರೇಶ ಬಡಗಿ, ಆಂಜನೇಯ ಆನೆಹೊಸೂರು, ಆನಂದ್‌, ಹುಸೇನಪ್ಪ, ಮುತ್ತಣ್ಣ ಹಸಮಕಲ್‌, ಬಸವರಾಜ ಹಟ್ಟಿ, ದುರುಗಪ್ಪ ಲಿಂಗಸುಗೂರು, ಶಿವರಾಜ ಹಸಮಕಲ್‌ ಇದ್ದರು.

ಸದಾಶಿವ ಆಯೋಗದ ವರದಿ ತಿರಸ್ಕರಿಸಲು ಒತ್ತಾಯ

ಶಿಡ್ಲಘಟ್ಟ: ಮೀಸಲು ಕುರಿತಂತೆ ನ್ಯಾ. ಸದಾಶಿವ ಆಯೋಗವು ನೀಡಿರುವ ವರದಿಯನ್ನು ಯಾವುದೆ ಕಾರಣಕ್ಕೂ ಅನುಷ್ಠಾನಗೊಳಿಸದೆ ತಿರಸ್ಕರಿಸುವಂತೆ ಭೋವಿ ಸಮುದಾಯದ ಮುಖಂಡರು ಸರಕಾರವನ್ನು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸುಮಾರು 35 ಲಕ್ಷ ಮಂದಿ ಬೋವಿ ಸಮುದಾಯದ ಜನಸಂಖ್ಯೆಯಿದ್ದರೂ ಕೇವಲ ಶೇ.1ರಷ್ಟು ಮೀಸಲು ನಿಗದಿಪಡಿಸಿ ನ್ಯಾ. ಸದಾಶಿವ ಆಯೋಗವು ಶಿಫಾರಸು ಮಾಡಿರುವುದು ಅವೈಜ್ಞಾನಿಕವಾಗಿದೆ. ಯಾವುದೆ ಕಾರಣಕ್ಕೂ ಆಯೋಗದ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಳ್ಳಬಾರದೆಂದು ಸರಕಾರವನ್ನು ಆಗ್ರಹಿಸಿದರು.

ಆಧುನಿಕ ಕಾಲದಲ್ಲೂ ಸಮುದಾಯದ ಅರ್ಧ ಮಂದಿ ಈಗಲೂ ಊರಿಂದ ಊರಿಗೆ ಅಲೆದಾಡಿಕೊಂಡು ಕಲ್ಲು ಬಂಡೆಗಳನ್ನು ಹೊಡೆದು ಕಲ್ಲು ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಅಲೆಮಾರಿ ಬದುಕು ನಡೆಸುತ್ತಿರುವ ಬಹುತೇಕ ಮಂದಿ ತಾವೂ ಶಿಕ್ಷಣ ಪಡೆದಿಲ್ಲ. ಜತೆಗೆ ತಮ್ಮ ಮಕ್ಕಳಿಗೂ ಶಿಕ್ಷಣ ಕೊಡಿಸಿಲ್ಲ.


ಇದರಿಂದಾಗಿ ಭೋವಿ ಸಮುದಾಯವು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಸದಾಶಿವ ಆಯೋಗದ ಶಿಫಾರಸುಗಳೇನಾದರೂ ಅನುಷ್ಠಾನಗೊಂಡರೆ ಸಮುದಾಯದವರು ಯಾವುದೆ ಕಾರಣಕ್ಕೂ ಅಭಿವೃದ್ಧಿ ಹೊಂದಲು ಅವಕಾಶ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ಒಳಮೀಸಲನ್ನು ರದ್ದುಪಡಿಸಿದ್ದರೂ ಕೂಡ ಸದಾಶಿವ ಆಯೋಗವು ನಮ್ಮ ಸಮುದಾಯಕ್ಕೆ ಶೇ.1ರಷ್ಟು ಒಳಮೀಸಲು ನೀಡುವಂತೆ ಶಿಫಾರಸು ಮಾಡುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತಾಗಿದೆ. ಅಲ್ಲದೆ ಮತ್ತೊಂದು ಕಡೆ ಸಮುದಾಯವನ್ನು ಎಲ್ಲಾ ರೀತಿಯಿಂದಲೂ ತುಳಿಯಲು ಉದ್ದೇಶಪೂರ್ವಕವಾಗಿ ಇಂತಹ ಶಿಫಾರಸನ್ನು ಮಾಡಿದೆ ಎಂದು ದೂರಿದರು.

ಹಾಗಾಗಿ ಯಾವುದೆ ಕಾರಣಕ್ಕೂ ಸದಾಶಿವ ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬೋವಿ ಸಮುದಾಯದ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಸಿದ್ದಾರೆ.

ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡಿ ಅವೈಜ್ಞಾನಿಕ ಹಾಗೂ ಭೋವಿ ಸಮಾಜದ ಅಭಿವೃದ್ಧಿಗೆ ಮಾರಕವಾದ ಸದಾಶಿವ ಆಯೋಗದ ವರದಿ ಕುರಿತು ಸಮುದಾಯದವರಲ್ಲಿ ಅರಿವು ಮೂಡಿಸುವ ಕೆಲಸ ನಡೆಯುತ್ತಿದ್ದು ವರದಿಯನ್ನು ತಿರಸ್ಕರಿಸುವಂತೆ ಸರಕಾರದ ಮೇಲೆ ಒತ್ತಡ ಹಾಕಲು ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದರು.

ಭೋವಿ ಸಮುದಾಯದ ಜಿಲ್ಲಾಧ್ಯಕ್ಷ ಜಿ.ಎಚ್. ಮುನಿಯಪ್ಪ, ಕಾರ್ಯಾಧ್ಯಕ್ಷ ಪಿ.ಡಿ. ವೆಂಕಟರಾಮ್, ಜಿಲ್ಲಾ ಉಪಾಧ್ಯಕ್ಷ ಎಂ.ಶ್ರೀನಿವಾಸ್, ಎನ್.ಜಯರಾಂ, ಖಜಾಂಚಿ ಎಲ್.ಮೂರ್ತಿ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಚಿಕ್ಕನರಸಿಂಹಪ್ಪ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ವಿ.ಕೆ. ಮೂರ್ತಿ, ಮುಖಂಡರಾದ ಬ್ಯಾಟರಾಯಪ್ಪ ಹಾಜರಿದ್ದರು.


ವಿಕ ಸುದ್ದಿಲೋಕ| Updated: Jul 10, 2012,

ಸದಾಶಿವ ಆಯೋಗ ವರದಿ ತಿರಸ್ಕಾರಕ್ಕೆ ಆಗ್ರಹ (ತರೀಕೆರೆ)

ತರೀಕೆರೆ: ನ್ಯಾ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕ ಮತ್ತು ಅಸಹನೀಯ, ಈ ವರದಿಯನ್ನು ಸರಕಾರ ತಿರಸ್ಕರಿಸಬೇಕು ಎಂದು ಬಂಜಾರ ಸೇವಾಲಾಲ್ ಸೇನೆ ಜಿಲ್ಲಾಧ್ಯಕ್ಷ ವಿ.ಶೇಖರ್‌ನಾಯ್ಕ ಹೇಳಿದರು. 

ಪಟ್ಟಣದಲ್ಲಿ ಬಂಜಾರ ಸೇವಾಲಾಲ್ ಸೇನೆ, ಬಂಜಾರ ಸೇವಾಲಾಲ್ ಯುವಸೇನೆ, ಸದಾಶಿವ ಆಯೋಗ ವರದಿ ವಿರುದ್ದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಈ ವರದಿಯಲ್ಲಿನ ಅಂಶಗಳು ಜನಾಂಗದ ಮಧ್ಯೆ ಜಗಳವನ್ನು ತರುವ ಮತ್ತು ಒಡೆದು ಆಳುವ ನೀತಿ ಅನುಸರಿಸುವಂತಿದೆ ಎಂದು ಆರೋಪಿಸಿದರು. ಜನಾಂಗದ ಸುಮಾರು ಪಂಗಡಗಳಿಗೆ ಕೇವಲ ಶೇ.3ರಷ್ಟು ಮೀಸಲಾತಿ ನೀಡಿ, ಒಂದೆರಡು ಪಂಗಡಗಳಿಗೆ 5ರಿಂದ 6ರಷ್ಟು ಮೀಸಲಾತಿ ನೀಡಿ ತಾರತಮ್ಯ ಧೋರಣೆ ಅನುಸರಿಸಲಾಗಿದ್ದು, ಲಕ್ಷಾಂತರ ಬಂಜಾರರಿಗೆ ಈ ವರದಿ ಮರಣ ಶಾಸನವಾಗಿದೆ ಎಂದು ಹೇಳಿದರು. 

ಬಂಜಾರ್ ಸೇವಾಲಾಲ್ ಸೇನೆ ಅಧ್ಯಕ್ಷ ಎಚ್.ಶಿವಶಂಕರನಾಯ್ಕ ಮಾತನಾಡಿ, ರಾಜ್ಯದಲ್ಲಿ ಬಂಜಾರ ಜನಾಂಗಕ್ಕೆ ಸೇರಿದ ಸುಮಾರು 45 ರಿಂದ 50 ಲಕ್ಷ ಜನರಿದ್ದು, ಅತಿ ಬಡತನದಿಂದ ಉತ್ತರ ಕರ್ನಾಟಕದ ಹಲವೆಡೆ ಮಕ್ಕಳನ್ನು ಮಾರಾಟ ಮಾಡುವ ಸ್ಥಿತಿಯಲ್ಲಿದ್ದಾರೆ. ಬಂಜಾರರಿಗೆ ಸರಿಯಾದ ಮತ್ತು ಸೂಕ್ತ ಮೀಸಲು ಅವಶ್ಯಕತೆ ಇದೆ ಎಂದು ಹೇಳಿದರು. ಬಂಜಾರ ಜನಾಂಗದ ಜನರು ಈಗಲೂ ಕಾಫಿ, ಅಡಕೆ ತೋಟಗಳಲ್ಲಿ, ಹೊಲಗದ್ದೆಗಳಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು ಅತ್ಯಂತ ಹಿಂದುಳಿದಿರುವ ಈ ಜಾತಿಗೆ ಮೀಸಲಾತಿ ತಾರತಮ್ಯ ಸರಿಯಲ್ಲ. ಸರಕಾರ ಸಂಪೂರ್ಣವಾಗಿ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಹೇಳಿದರು. 


ಸಮಾಜದ ಮುಖಂಡ ಸೋಮ್ಲಾನಾಯ್ಕ ಮಾತನಾಡಿ, ಈ ವರದಿಯಿಂದ ಬಂಜಾರರಿಗೆ ಅನ್ಯಾಯವಾಗುತ್ತದೆ. ಮುಖ್ಯವಾಹಿನಿಗೆ ಬಾರದ ಈ ಜನಾಂಗ ಈ ವರದಿಯಿಂದ ಶೋಷಣೆಗೊಳಗಾಗುತ್ತದೆ ಎಂದು ಆರೋಪಿಸಿದರು. ಸರಕಾರ ಈ ವರದಿಯನ್ನು ಒಪ್ಪಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. 

ಇದಕ್ಕೂ ಮೊದಲು ಸಮಾಜದ ಪ್ರಮುಖರು ಪಟ್ಟಣದ ಸಾಲಮಾರದಮ್ಮ ದೇವಸ್ಥಾನದಿಂದ ತಾಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಶಿವಕುಮಾರ್‌ಗೆ ಮನವಿ ಸಲ್ಲಿಸಿದರು. 

ತಾಲೂಕು ಪಂಚಾಯಿತಿ ಸದಸ್ಯೆ ಪಾರ್ವತಿಬಾಯಿ, ಚಟ್ನಹಳ್ಳಿ ಮಂಜಾನಾಯ್ಕ, ಶಂಕರನಾಯ್ಕ, ಬೇಲೂರ್ ನಾಯ್ಕ, ದಾಸೋನಾಯ್ಕ, ಸುರೇಂದ್ರನಾಯ್ಕ, ದೇವೇಂದ್ರನಾಯ್ಕ, ಅಣ್ಣಪ್ಪನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.  



ವಿಕ ಸುದ್ದಿಲೋಕ| Updated: Apr 17, 2015,

ಸದಾಶಿವ ವರದಿ ಕೈಬಿಡಿ (ಬಳ್ಳಾರಿ)

ಬಳ್ಳಾರಿ: ಪರಿಶಿಷ್ಟ ಜಾತಿಗಳ ಒಳಮೀಸಲಿಗೆ ಶಿಫಾರಸುಮಾಡಿರುವ ನ್ಯಾ.ಎ.ಜೆ. ಸದಾಶಿವ ವಿಚಾರಣಾ ಆಯೋಗದ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಂಜಾರ್(ಲಂಬಾಣಿ)ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಜನರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದಿಂದ ಹೊರಟ ಪ್ರತಿಭಟನಾಕಾರರು ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿದ ನೂರಾರು ಬಂಜಾರ ಸಮಾಜದ ಮಹಿಳೆಯರು ಆಯೋಗದ ವರದಿಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವವಹಿಸಿದ್ದ ಬಂಜಾರ ಸಮಾಜದ ಸರ್‌ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವ ನ್ಯಾ.ಎ.ಜೆ. ಸದಾಶಿವ ವಿಚಾರಣಾ ಆಯೋಗವು ಪರಿಶಿಷ್ಟ ಜಾತಿಗಳಲ್ಲಿ ನ್ಯಾಯ ಕಲ್ಪಿಸುವ ಬದಲಾಗಿ ಬಂಜಾರ ಜನಾಂಗಕ್ಕೆ ಅನ್ಯಾಯ ಮಾಡಿದೆ. ಇದೊಂದು ಪೂರ್ವಗ್ರಹ ಪೀಡಿತ ವರದಿಯಾಗಿದೆ ಎಂದು ದೂರಿದರು.


ಪರಿಶಿಷ್ಟರಲ್ಲೇ ಉಪ ಜಾತಿಯ ಜನರ ಹಿತಾಸಕ್ತಿಗೆ ಸಚಿವರಾದ ನಾರಾಯಣಸ್ವಾಮಿ ಮತ್ತು ಗೋವಿಂದಕಾರಜೋಳರನ್ನು ಮುಂದಿಟ್ಟುಕೊಂಡು ನ್ಯಾ.ಎ.ಜೆ. ಸದಾಶಿವರು ಮುಖ್ಯಮಂತ್ರಿಗೆ ವರದಿ ಸಲ್ಲಿಸಿರುವುದನ್ನು ನೋಡಿದರೆ ರಾಜಕೀಯ ಒತ್ತಡಕ್ಕೆ ಮಣಿದು ಉಪಜಾತಿಗಳಿಗೆ ಹೆಚ್ಚು ಅನುಕೂಲವಾಗುವಂತೆ ಸಿದ್ಧಪಡಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸರಕಾರ ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನ್ಯಾ.ಎ.ಜೆ. ಸದಾಶಿವ ವಿಚಾರಣಾ ಆಯೋಗದ ವರದಿಯ ಅವೈಜ್ಞಾನಿಕ ಹಾಗೂ ಅಸಂವಿಧಾನಿಕ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಪರಿಶಿಷ್ಟರಲ್ಲಿ ಒಡಕು ಹುಟ್ಟಿಸುವ ಒಳ ಮೀಸಲಾತಿಯನ್ನು ಕೈಬಿಡಬೇಕು ಹಾಗೂ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ನೀಡಿರುವ ಪರಿಶಿಷ್ಟರ ಮೀಸಲು ಯಥಾ ಸ್ಥಿತಿಯಲ್ಲಿ ಮುಂದವರಿಸಬೇಕು ಎಂದು ಒತ್ತಾಯಿಸಿದರು. ಆ ನಂತರ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.

ಎಲ್. ಮೀಟ್ಯಾ ನಾಯ್ಕ, ಡಾ.ಸುರೇಶ್ ನಾಯ್ಕ, ಚಂದ್ರನಾಯ್ಕ, ಧಾಮು ನಾಯ್ಕ, ಸೇಟು ನಾಯ್ಕ, ಸ್ವಾಮಿ ನಾಯ್ಕ, ಶಂಕರ್ ನಾಯ್ಕ, ರಾಮು, ಬಾಬು, ಶಂಕರ್, ಸ್ವಾಮಿ ನಾಯ್ಕ ಇತರರಿದ್ದರು. ಜಿಲ್ಲೆಯ ನಾನಾ ತಾಲೂಕುಗಳಿಂದ 800ಕ್ಕೂ ಹೆಚ್ಚು ಲಂಬಾಣಿ ಜನಾಂಗದ ಮಹಿಳೆಯರು, ಪುರುಷರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 




ವಿಕ ಸುದ್ದಿಲೋಕ| Updated: Jul 10, 2012

ನ್ಯಾ.ಸದಾಶಿವ ಆಯೋಗ ವರದಿ ತಿರಸ್ಕರಿಸಲು ಆಗ್ರಹ (ಕಲಬುರಗಿ)

ಕಲಬುರಗಿ: ಒಳ ಮೀಸಲಾತಿ ಕಲ್ಪಿಸುವ ನ್ಯಾ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿರುವುದನ್ನು ತಕ್ಷಣವೇ ಅದನ್ನು ತಿರಸ್ಕರಿಸಬೇಕು ಎಂದು ಮಾಜಿ ಮಂತ್ರಿ ರೇವೂ ನಾಯಕ ಬೆಳಮಗಿ, ಸುಭಾಷ ರಾಠೋಡ ಮತ್ತಿತರ ಪರಿಶಿಷ್ಟ ಜಾತಿಗಳ ಸಮುದಾಯದ ನಾಯಕರು ಒಕ್ಕೋರಲಿನಿಂದ ಸರಕಾರಕ್ಕೆ ಆಗ್ರಹಿಸಿದ್ದಾರೆ. 

ಲಂಬಾಣಿ ಸಮುದಾಯ ಮುಖಂಡರಾದ ನಾಮದೇವ ರಾಠೋಡ, ಭೋವಿ ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನ ಕುಸ್ತಿ, ಭಜಂತ್ರಿ ಸಮುದಾಯದ ಬಿ.ಬಿ.ಭಜಂತ್ರಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರೊಂದಿಗೆ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಸದಾಶಿವ ಆಯೋಗದ ವರದಿಯಲ್ಲಿ ಏನಿದೆ ಎಂಬುದು ಜನರಿಗೆ ಸರಿಯಾಗಿ ಗೊತ್ತಿಲ್ಲ. ಒಂದೇ ಸಮುದಾಯವನ್ನು ಕೇಂದ್ರೀಕೃತಗೊಳಿಸಿ ಸಿದ್ಧಪಡಿಸಲಾಗಿದೆ. ಎಲ್ಲರನ್ನು ಕತ್ತಲಲ್ಲಿಟ್ಟು ವರದಿಯನ್ನು ಜಾರಿಗೊಳಿಸಲು ಸರಕಾರ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು. 

2001ರ ಗಣತಿಯಂತೆ ರಾಜ್ಯದಲ್ಲಿ ಭೋವಿ ಸಮಾಜದವರು 9.48 ಲಕ್ಷ ಜನಸಂಖ್ಯೆ ಇದೆ, ಆದರೆ 2011ರಲ್ಲಿ ಬಂದ ಸದಾಶಿವ ಆಯೋಗದ ವರದಿಯಲ್ಲಿ ಹೇಳುವಂತೆ ಈ ಸಮಾಜದ ಜನಸಂಖ್ಯೆ 9.48 ಲಕ್ಷ. ಹತ್ತು ವರ್ಷಗಳಲ್ಲಿ ಜನಸಂಖ್ಯೆ ಹೇಗೆ ಕಡಿಮೆಯಾಗುತ್ತದೆ ಎಂದು ಪ್ರಶ್ನಿಸಿದರು. 


ಲಂಬಾಣಿ, ಭೋವಿ, ಕೊರಮ, ಕೊರಚ, ಭಜಂತ್ರಿ ಇನ್ನಿತರರ ಸಮಾಜಗಳನ್ನು ಮೀಸಲು ಪಟ್ಟಿಯಿಂದ ದೂರವಿಡುವ ಉದ್ದೇಶದಿಂದಲೇ ಈ ವರದಿಯನ್ನು ಸಿದ್ಧಪಡಿಸಿದಂತಿದೆ. ಎಲ್ಲಿಯೋ ಕುಳಿತುಕೊಂಡು, ಯಾವುದೋ ಒತ್ತಡಕ್ಕೆ ಮಣಿದು ಇಲ್ಲದ ಅಂಕಿ ಸಂಖ್ಯೆಗಳನ್ನು ಆಯೋಗ ತನ್ನ ವರದಿಯಲ್ಲಿ ನೀಡಿದೆ ಎಂದು ಗಂಭೀರವಾಗಿ ಆರೋಪಿಸಿದರು. ಅಲ್ಲದೆ ಈ ಸಮಾಜದವರು ಪರಿಶಿಷ್ಟರಲ್ಲಿಯೇ ಪ್ರಬಲರು, ಅಶ್ಪೃಶ್ಯತೆಯಿಂದ ದೂರವಿದ್ದಾರೆ ಎಂದು ಹೇಳಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು. 




ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳು ಇದನ್ನು ಜಾರಿಗೊಳಿಸಲು ಮುಂದಾಗಬಾರದು, ಗೌಪ್ಯವಾಗಿರುವ ವರದಿಯನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ, ಚರ್ಚೆ ನಡೆಸಿದ ಬಳಿಕ ಅದರಲ್ಲಿರುವ ಅವೈಜ್ಞಾನಿಕ ಅಂಶಗಳನ್ನು ತೆಗೆದು ಹಾಕಿದ ಬಳಿಕವೇ ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಸುಭಾಷ ರಾಠೋಡ ಮತ್ತು ನಾಮದೇವ ರಾಠೋಡ ಆಗ್ರಹಿಸಿದರು. 

ಯಾವುದೇ ಕಾರಣಕ್ಕೂ ವರದಿ ಜಾರಿಗೊಳಿಸಬಾರದು, ಒಂದು ವೇಳೆ ನಮ್ಮ ಭಾವನೆ ಧಿಕ್ಕರಿಸಿ, ಯಾವುದೋ ಒತ್ತಡಕ್ಕೆ ಮಣಿದು ಜಾರಿಗೆ ತರಲು ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ರಾಜ್ಯದೆಲ್ಲಡೆ ಉಗ್ರ ಸ್ವರೂಪದ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು. 

ಪತ್ರಿಕಾಗೋಷ್ಠಿಯಲ್ಲಿ ಅನಿಲ್ ಜಾಧವ, ಭೀಮರಾವ ಭಜಂತ್ರಿ, ರಾಮಚಂದ್ರ ಜಾಧವ, ವಿಠ್ಠಲ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರಿದ್ದರು. 

ಜಾತಿ ಗಣತಿ ಅಂಕಿಗಳನ್ನು ಪಡೆದುಕೊಳ್ಳಿ 

ಸರಕಾರ ಹಿಂದುಳಿದ ಆಯೋಗದ ಮೂಲಕ ಜಾತಿ ಗಣತಿಯನ್ನು ನಡೆಸುತ್ತಿದ್ದು, ಅಲ್ಲಿ ಬರುವ ಅಂಕಿ ಸಂಖ್ಯೆಗಳನ್ನು ಆಧಾರವಾಗಿಟ್ಟುಕೊಂಡು, ಈಗಿರುವ ನ್ಯಾ.ಸದಾಶಿವ ಆಯೋಗದಲ್ಲಿನ ಅವೈಜ್ಞಾನಿಕ ನಿರ್ಧಾರಗಳನ್ನು ತೊಡೆದು ಹಾಕಬೇಕು ಎಂದು ಮಾಜಿ ಮಂತ್ರಿ ರೇವೂ ನಾಯಕ ಬೆಳಮಗಿ ಆಗ್ರಹಿಸಿದರು. 

ವರದಿಯ ಬಳಿಕ ಅಂಕಿ ಸಂಖ್ಯೆಗಳನ್ನು ಇಟ್ಟುಕೊಂಡು, ತಜ್ಞರೊಂದಿಗೆ ಸಮಾಲೋಚನೆ ನಡೆಸಿ ವರದಿಯನ್ನು ವೈಜ್ಞಾನಿಕ ರೂಪ ನೀಡಬೇಕು ಎಂದು ಒತ್ತಾಯಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿದಂತೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಅದು ಬಿಟ್ಟು ಹೀಗೆ ತಾರತಮ್ಯ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ತಿಳಿಸಿದರು. 



ವಿಕ ಸುದ್ದಿಲೋಕ| Updated: Jul 10, 2012,

ಸದಾಶಿವ ಆಯೋಗದ ವರದಿ ತಿರಸ್ಕರಿಸಲು ಒತ್ತಾಯ (ಕೊಪ್ಪಳ)

ಕೊಪ್ಪಳ ; ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ, ನ್ಯಾ.ಸದಾಶಿವ ಆಯೋಗ ವರದಿ ವಿರೋಧಿ ಹೋರಾಟ ಒಕ್ಕೂಟದ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು. 

ನ್ಯಾ.ಎ.ಜೆ.ಸದಾಶಿವ ಆಯೋಗವು ಒಂದೇ ವರ್ಷದಲ್ಲಿ ತರಾತುರಿ ಸಿದ್ಧಪಡಿಸಿ ವರದಿ ಸಲ್ಲಿಸಿದ್ದು, ವರದಿ ಹಿಂದೆ ಹಲವಾರು ಪಟ್ಟಭದ್ರಹಿತಾಸಕ್ತಿಗಳ ಕೈವಾಡ ಇದೆ ಎಂಬುದು ಮೇಲ್ನೋಟಕ್ಕೆ ಸಾಬಿತಾಗಿದೆ. ವರದಿ ಸತ್ಯಕ್ಕೆ ದೂರವಾಗಿದೆ. ಈ ವರದಿ ಅಂಗೀಕರಿಸದೆ ರಾಜ್ಯಪಾಲರು ಹಾಗೂ ಸಿಎಂ ಕೂಡಲೇ ಅದನ್ನು ತಿರಸ್ಕರಿಸಬೇಕು ಎಂದರು. 

ಎಚ್ಚರಿಕೆ: ವರದಿ ಅವೈಜ್ಞಾನಿಕ, ಅಸಂವಿಧಾನಿಕ ಹಾಗೂ ರಾಜಕೀಯ ಪ್ರೇರಿತವಾಗಿದೆ. ಆಯೋಗದ ಶಿಫಾರಸುಗಳು, ಪರಿಶಿಷ್ಟ ಜಾತಿ, ಉಪಜಾತಿಗಳಲ್ಲಿ ವೈಷಮ್ಯ ಹುಟ್ಟಿಸಿ ದಲಿತ ಸಮುದಾಯ ಒಡೆದಾಳುವ ನೀತಿಯಿಂದ ಕೂಡಿದ್ದು, ವರದಿಯ ಶಿಫಾರಸಿಗೆ ಯಾವುದೇ ಮಹತ್ವ ನೀಡಬಾರದು. ಸುಪ್ರಿಂಕೋರ್ಟ್, ಹೈಕೋರ್ಟ್, ಜಿಲ್ಲಾ ಕೋರ್ಟ್‌ಗಳಲ್ಲಿ ನ್ಯಾಯಾಧೀಶ ಸ್ಥಾನದಲ್ಲಿ ಐಎಎಸ್,ಐಪಿಎಸ್, ಐಎಫ್‌ಎಸ್ ಸೇವೆಗಳಲ್ಲಿ ಸ್ಪೃಶ್ಯರೆಂದು ಪರಿಗಣಿಸಲ್ಪಟ್ಟಿರುವ ವಡ್ಡರ, ಲಂಬಾಣಿ, ಕೊರವ,ಕೊರಚ,ಸುಡುಗಾಡು ಸಿದ್ಧ ಜನಾಂಗಕ್ಕೆ ಸೇರಿದವರು ಕಂಡುಬರುವುದಿಲ್ಲ. ರಾಜ್ಯಗಳಲ್ಲಿ ಕ್ಲಾಸ್-1 ಕ್ಲಾಸ್-2 ಸೇವೆಗಳಲ್ಲಿ ಬೆರಳೆಣಿಕೆ ಈ ಜನಾಂಗದವರಿಲ್ಲ. ಹೀಗಿರುವಾಗ ನ್ಯಾ.ಸದಾಶಿವ ವರದಿ, ಸುಳ್ಳಿನ ಕಂತೆಯಂತೆಯಾಗಿದೆ. ರಾಜ್ಯ ಸರಕಾರ ಈ ವರದಿ ಅಂಗೀಕರಿಸಲು ಮುಂದಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 


ನ್ಯಾ.ಸದಾಶಿವ ಆಯೋಗ ವರದಿ ವಿರೋಧಿ ಹೋರಾಟ ಒಕ್ಕೂಟದ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಭರತ್ ನಾಯಕ್, ಜಿಲ್ಲಾ ಭೋವಿ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಭೋವಿ, ಜಿಲ್ಲಾ ಭಜಂತ್ರಿ ಕೊರವ ಸಮಾಜದ ಜಿಲ್ಲಾಧ್ಯಕ್ಷ ಮಹೇಶ ಭಜಂತ್ರಿ, ಮುಖಂಡರಾದ ರೇವಣಪ್ಪ ಭೋವಿ, ನಾಗಪ್ಪ ಭೋವಿ, ರಾಮಕಷ್ಣ ರಾಥೋಡ್, ಸುರೇಶ ಭೋವಿ, ಭೀಮಜ್ಜ ಹಳ್ಳಿ, ದೇವಪ್ಪ ಭಾಗ್ಯನಗರ, ಶೇಖರಪ್ಪ ಲಂಬಾಣಿ, ಹುಲುಗಪ್ಪ ಭಜಂತ್ರಿ, ಹನುಮೇಶ,ಎಲ್.ಶಿವಪ್ಪ, ಸೇರಿದಂತೆ ಇತರರು ಇದ್ದರು.  


ವಿಕ ಸುದ್ದಿಲೋಕ| Updated: Nov 6, 2015,

ಒಳ ಮೀಸಲು : ಸದಾಶಿವ ಆಯೋಗ ವರದಿ ರದ್ದತಿಗೆ ಆಗ್ರಹ (ಶಿವಮೊಗ್ಗ)

ಶಿವಮೊಗ್ಗ: ಪರಿಶಿಷ್ಟ ಸಮುದಾಯದಲ್ಲಿ ಒಳ ಮೀಸಲಾತಿ ನೀಡುವಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ರದ್ದುಪಡಿಸುವಂತೆ ವರದಿಯ ವಿರೋಧಿ ಒಕ್ಕೂಟದ ಆಗ್ರಹಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಹಾಗೂ ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಭೋಜಾನಾಯ್ಕ, ನ್ಯಾಯಮೂರ್ತಿಗಳು ಆಯೋಗ ರಚನೆಯ ಮೂಲ ಉದ್ದೇಶವನ್ನೇ ಬದಿಗೊತ್ತಿ ತಮಗೆ ಸಂಬಂಧಿಸಿರದ ವಿಷಯದ ವರದಿ ಸಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏಕವ್ಯಕ್ತಿ ಆಯೋಗ ರಚನೆ ಸಂದರ್ಭದಲ್ಲಿ ಸರಕಾರ ಆಯೋಗಕ್ಕೆ ಪರಿಶಿಷ್ಟರ ಕಲ್ಯಾಣಕ್ಕೆ ರೂಪಿಸಿರುವ ಕಾರ್ಯಕ್ರಮ ಆ ಸಮುದಾಯದ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿದೆಯೋ ಇಲ್ಲವೋ ಎಂಬುದನ್ನು, ಒಂದು ವೇಳೆ ತಲುಪಿಲ್ಲದಿದ್ದರೆ ಅದಕ್ಕೆ ಕಾರಣ ಹುಡುಕುವಂತೆ ಮಿತಿ ನಿರ್ದಿಷ್ಟಪಡಿಸಿತ್ತು. ಆದರೆ ನ್ಯಾಯಮೂರ್ತಿಗಳು ತಮ್ಮ ಮಿತಿಮೀರಿ ಪರಿಶಿಷ್ಟರಲ್ಲಿ ಒಳಮೀಸಲಾತಿಯನ್ನು ಶೇಕಡವಾರು ನೀಡುವಂತೆ ಶಿಫಾರಸು ಮಾಡಿ ಅವೈಜ್ಞಾನಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿರುವುದು ಬಹುಪಾಲು ಪರಿಶಿಷ್ಟರಿಗೆ ಆಘಾತ ಉಂಟು ಮಾಡಿದೆ ಎಂದರು.


ಮಾಧ್ಯಮಗಳಲ್ಲಿ ವರದಿಯಾದಂತೆ ಪರಿಶಿಷ್ಟರಿಗೆ ಮೀಸಲಿರುವ ಶೇ.15 ರಷ್ಟು ಸೌಲಭ್ಯದಲ್ಲಿ ಬಲಗೈಗೆ ಶೇ.6, ಎಡಗೈಗೆ ಶೇ.5 ಹಾಗೂ ಇತರೆ ಪರಿಶಿಷ್ಟರಿಗೆ ಶೇ. 1 ಹಾಗೂ ಸ್ಪರ್ಶರಿಗೆ ಶೇ. 3ರ ಪ್ರಮಾಣದಲ್ಲಿ ಮೀಸಲು ವರ್ಗಿಕರಿಸುವಂತೆ 2 ಸಮುದಾಯಕ್ಕೆ ಒಟ್ಟು ಶೇ.11 ಮತ್ತು ಇನ್ನುಳಿದ 99 ಜಾತಿಗೆ ಶೇ. 4ರಷ್ಟು ನಿಗದಿಪಡಿಸಲಾಗಿದೆ.

ವರದಿಯ ರಾಜಕೀಯ ಪ್ರೇರಿತ ಎಂದು ಕಂಡುಬರುತ್ತದೆ. ರಾಜ್ಯದಲ್ಲಿ ಬಂಜಾರ ಸಮಾಜ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ . ಅನಕ್ಷರತೆ, ಬಡತನದಿಂದ ಮಕ್ಕಳನ್ನು ಸಾಕಲಾಗದೆ ಮಕ್ಕಳನ್ನೇ ಮಾರಿದ ಘಟನೆಗಳಿವೆ. ಅದೇ ರೀತಿ ಕಲ್ಲು ಒಡೆಯುವ ಮತ್ತು ನೆಲ ಅಗೆದು ಜೀವಿಸುತ್ತಿರುವ ಬೋವಿ, ಕೊರಚ, ಕೊರಮ ಸಮುದಾಯದಲ್ಲಿ ಅತ್ಯಂತ ಬಡವರಿದ್ದಾರೆ. ಮೇಲ್ವರ್ಗದಿಂದ ಬಹಳಷ್ಟು ದೂರ ಇರುವ ಈ ಸಮುದಾಯವರನ್ನು ಸ್ಪರ್ಶರು ಎಂದು ಆಯೋಗ ಪರಿಗಣಿಸಿದಂತಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ದುರ್ಬಲವಾಗಿರುವ ಇಂತಹ ಅನೇಕ ಸಮುದಾಯಗಳನ್ನು ಪರಿಶಿಷ್ಟರ ಸೌಲಭ್ಯದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದು ದೂರಿದರು.

ರಾಜ್ಯದಲ್ಲಿ 2 ಕೋಟಿ ಪರಿಶಿಷ್ಟರಿದ್ದಾರೆ ಎಂದು ಸರಕಾರವೇ ಘೋಷಿಸಿದೆ. ಆದರೆ ಆಯೋಗ ಕೇವಲ 96 ಲಕ್ಷ ಜನರನ್ನು ಸಂಪರ್ಕಿಸಿ ವರದಿ ಸಿದ್ಧಪಡಿಸಿದೆ ಎಂದು ಆಯೋಗ ಹೇಳಿಕೊಂಡಿದೆ. ಆದರೆ ಇದೊಂದು ರಾಜಕೀಯ ಪ್ರೇರಿತ ವರದಿಯಾಗಿದ್ದು ಅದನ್ನು ರದ್ದುಪಡಿಸಬೇಕು. ಜನಸಂಖ್ಯೆ, ಸಾಮಾಜಿಕ ಸ್ಥಿತಿಗತಿಯನ್ನು ಮಾನದಂಡವಾಗಿಟ್ಟುಕೊಂಡು ಹೊಸ ಆಯೋಗ ರಚಿಸಬೇಕು ಎಂದು ಒತ್ತಾಯಿಸಿದರು.

ಬೋವಿ ಸಮಾಜದ ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ, ಜಿಲ್ಲಾ ಬಂಜಾರ ಸಂಘದ ಮಾಜಿ ಅಧ್ಯಕ್ಷ ನಾನ್ಯಾನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಾನಾಯ್ಕ, ಎಪಿಎಂಸಿ ಸದಸ್ಯ ಮಂಡೇನಕೊಪ್ಪ ದೇವರಾಜ, ಪರಿಶಿಷ್ಟ ಪ್ರಮುಖರಾದ ಧೀರರಾಜ್, ಜಗದೀಶ ನಾಯ್ಕ ಗೋಷ್ಠಿಯಲ್ಲಿದ್ದರು.


Updated: Jun 29, 2012

ಸೆ. 5ರಂದು ನಗರದಲ್ಲಿ ಪ್ರತಿಭಟನೆ (ಹೊಸಪೇಟೆ)

ಹೊಸಪೇಟೆ: ಪ.ಜಾತಿಯ ಒಳ ಮೀಸಲು ಹಂಚಿಕೆ ಕುರಿತ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಅವೆಜ್ಞಾನಿಕವಾಗಿದೆ ಎಂದು ನ್ಯಾ. ಎ.ಜೆ. ಸದಾಶಿವ ಆಯೋಗ ವರದಿ ವಿರೋಧಿ ಹೋರಾಟ ಒಕ್ಕೂಟ ಆಗ್ರಹಿಸಿದೆ.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖಂಡ ಭೀಮಾನಾಯ್ಕ ಮಾತನಾಡಿ, ನ್ಯಾ. ಎ.ಜೆ. ಸದಾಶಿವ ಆಯೋಗಕ್ಕಾಗಿ 12 ಕೋಟಿ ರೂ. ಖರ್ಚು ಮಾಡಿದರೂ ವಸ್ತುನಿಷ್ಠ ವರದಿ ನೀಡಿಲ್ಲ.

ಈ ವರದಿಯ ಸಮೀಕ್ಷೆ ಸಂಶಯಾಸ್ಪದವಾಗಿದೆ. ಪ.ಜಾತಿ ಪಟ್ಟಿಯಲ್ಲಿ 101 ಜಾತಿಗಳಿದ್ದು, 99 ಜಾತಿಯ ಜನರಿಗೆ ಅನ್ಯಾಯ ಮಾಡುವ ರೀತಿಯಲ್ಲಿ ವರದಿ ನೀಡಲಾಗಿದೆ.


ವರದಿ ಖಂಡಿಸಿ, ಸೆ.5ರಂದು ನಗರದಲ್ಲಿ ಬಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಕನಿಷ್ಠ 22 ಸಾವಿರ ಜನರು ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಗುಳೆ

ರಾಜ್ಯದ ತಾಂಡಾಗಳಿಂದ, ಭೋವಿ ಕಾಲೊನಿಗಳಿಂದ ಜನ ಗುಳೆ ಹೋಗುತ್ತಿದ್ದಾರೆ. ಪಕ್ಕದ ಗೋವಾ ರಾಜ್ಯಕ್ಕೆ 15ರಿಂದ 20 ಲಕ್ಷ ಲಂಬಾಣಿಗರು ಪ್ರತಿ ವರ್ಷ ಗುಳೆ ಹೋಗುತ್ತಾರೆ.

ಅಲ್ಲಿಯೂ ಬಿಜೆಪಿ ನೇತತ್ವದ ಸರಕಾರವಿದ್ದು, ಸಿಎಂ ಜಗದೀಶ್ ಶೆಟ್ಟರ್ ಅಲ್ಲಿನ ಸರಕಾರದಿಂದ ಮಾಹಿತಿ ಪಡೆಯಲಿ ಎಂದು ಸವಾಲು ಹಾಕಿದರು.

ಮುಖಂಡರಾದ ದೊಡ್ಡ ರಾಮಣ್ಣ, ರಾಮಾನಾಯ್ಕ, ವಿ. ಹನುಮಂತಪ್ಪ, ಕಷ್ಣಾನಾಯ್ಕ, ಬಾಳಪ್ಪ ತಿಮ್ಮಪ್ಪ, ಅಡಿವೆಪ್ಪ, ರಾಮಾಂಜೀನಿ ಮತ್ತಿತರರಿದ್ದರು.



ವಿಕ ಸುದ್ದಿಲೋಕ| Updated: Sep 3, 2012

ಸದಾಶಿವ ವರದಿ ವಿರೋಸಿ ಪ್ರತಿಭಟನೆ (ಜಗಳೂರು)

ಜಗಳೂರು: ಸದಾಶಿವ ಆಯೋಗದ ವರದಿ ವಿರೋಧಿಸಿ ಭೋವಿ, ಕೊರಚ, ಲಂಬಾಣಿ, ಕೊರಮ, ಶಿಳ್ಲೇಕ್ಯಾತ, ಸುಡಗಾಡು ಸಿದ್ದ ಸಮಾಜದವರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ. 

ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಪರಿಶಿಷ್ಟ ಜಾತಿಯ ಉಪ ಜಾತಿಗಳಾದ ಭೋವಿ, ಲಂಬಾಣಿ, ಕೊರಚ, ಕೊರಮ, ಸುಡುಗಾಡು ಸಿದ್ದ ಸೇರಿದಂತೆ ನೂರಕ್ಕೂ ಹೆಚ್ಚು ಸಮುದಾಯ ಗಳಿವೆ. ಈ ಶೋಷಿತ ಸಮುದಾಯಗಳು ಸ್ವಾತಂತ್ರ್ಯ ಪೂರ್ವದಿಂದಲೂ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದು ಳಿದಿದ್ದು, ಸಂವಿಧಾನಿಕ ಹಕ್ಕುಗಳಿಂದ ವಂಚಿತರಾಗಿ ದಯನೀಯ ಸ್ಥಿತಿಯಲ್ಲಿ ಜೀವನ ನಿರ್ವಹಣೆ ಮಾಡುತ್ತಿವೆ ಎಂದು ಅಲವತ್ತುಗೊಂಡರು. 

ಅಂಬೇಡ್ಕರ್‌ರ ಪರಿಶ್ರಮದಿಂದ ನೂರಕ್ಕೂ ಹೆಚ್ಚು ಶೋಷಿತ ಸಮಾಜಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸಂವಿಧಾನಿಕ ಸೌಲಭ್ಯ ಕಲ್ಪಿಸಿದ್ದು, 2005 ರಲ್ಲಿ ರಚನೆಯಾದ ಸದಾಶಿವ ಆಯೋಗದ ಒಳ ಮೀಸಲು ನೆಪದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಗ್ಗ ಟ್ಟನ್ನು ಮುರಿಯುವ ಅವೈಜ್ಞಾನಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ ಎಂದು ಆರೋಪಿಸಿದರು. 


ಈ ವರದಿ ಪಕ್ಷಪಾತದಿಂದ ಕೂಡಿದ್ದು, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳಾದ ಭೋವಿ, ಲಂಬಾಣಿ, ಕೊರಮ, ಕೊರಚ ಸುಡುಗಾಡು ಸಿದ್ದ ಸಮುದಾಯದ ಜನಸಂಖ್ಯೆ ಸುಮಾರು 2.80 ಕೋಟಿ ಇದೆ. ಆದರೆ, ಸದಾಶಿವ ಆಯೋಗ ನೀಡಿರುವ ವರದಿ ಈ ಸಮಾಜಗಳಿಗೆ ಮಾರಕವಾಗಿದೆ. ಪೂರ್ವಗ್ರಹ ಪೀಡಿತ ಒಳ ಮೀಸಲು ವರದಿಯನ್ನು ಸರಕಾರ ತಿರಸ್ಕರಿಸ ಬೇಕೆಂದು ಒತ್ತಾಯಿಸಿದರು. 

ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಪುರು ಷೊತ್ತಮನಾಯ್ಕ, ಭೋವಿ ಸಮಾಜದ ಕೇಶವ ಮೂರ್ತಿ, ಶ್ರೀನಿವಾಸ್, ಎ.ನಾರಾಯಣ್, ಎಂ.ಆರ್.ಪುಟ್ಟಣ್ಣ, ಅಂಜಿನಪ್ಪ, ಲಂಬಾಣಿ ಸಮಾಜದ ಸುರೇಶ್‌ನಾಯ್ಕ, ಶಿಳ್ಳೇಕ್ಯಾತ ಸಮಾಜದ ಪಂಪಣ್ಣ, ಕೊರಚ ಸಮಾಜದ ಬಾಬೇಶ್ ಪಾಲ್ಗೊಂಡಿದ್ದರು. 


ವಿಕ ಸುದ್ದಿಲೋಕ| Updated: Sep 28, 2013

ಸದಾಶಿವ ಆಯೋಗ ವರದಿ ರದ್ದುಪಡಿಸಲು ಭೋವಿ ಸಮಾಜ ಒತ್ತಾಯ

ಬೆಳಗಾವಿ :ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಭೋವಿ(ವಡ್ಡರ)ಸೇವಾ ಸಂಘ ಹಾಗೂ ಮಾಂಗ ಗಾರುಡಿ ಸಮಾಜದವರು ಜಂಟಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದರು. 

ರಾಜ್ಯದಲ್ಲಿ ಅನೇಕ ಪರಿಶಿಷ್ಟ ಜಾತಿ, ಸಮುದಾಯಗಳು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ತೀರ ಹಿಂದುಳಿದ ಅಸಹಾಯಕ, ಅಸಂಘಟಿತ, ದಲಿತ, ಶ್ರಮಿಕ ಜಾತಿಗಳಾಗಿವೆ. ಈ ಸಮುದಾಯಗಳ ಶೇ.90ರಷ್ಟು ಜನ ಕೂಲಿನಾಲಿಯಿಂದ ಜೀವನ ಸಾಗಿಸುತ್ತಿದ್ದು ತಲೆತಲಾಂತರಗಳಿಂದ ಶೋಷಣೆ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾಗಿ ಬಂದಿವೆ. ಸಂವಿಧಾನಬದ್ಧ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸೌಲಭ್ಯಗಳು ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು ಈ ಜಾತಿಗಳ ಓಣಿಗಳಲ್ಲಿ, ವಸತಿಗಳಲ್ಲಿ ಪರಿಶೀಲಿಸಿದರೆ ಸತ್ಯ ಸ್ಥಿತಿ ಗೊತ್ತಾಗುತ್ತದೆ. 

ಆದರೆ ನ್ಯಾ.ಮೂ. ಎ. ಜೆ. ಸದಾಶಿವ ಆಯೋಗ ಯಾವುದೇ ರೀತಿಯ ಸತ್ಯ ಪರಿಸ್ಥಿತಿ ಪರಿಶೀಲಿಸಿದೆ ಯಾವುದೋ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರದಿಂದ ವರದಿ ತಯಾರಿಸಿದ್ದು ಇದರಿಂದ ಅನೇಕ ಪರಿಶಿಷ್ಟ ಜಾತಿ, ಸಮುದಾಯಗಳಿಗೆ ಅನ್ಯಾಯವಾಗಲಿದೆ. ಆದ್ದರಿಂದ ಈ ವರದಿಯನ್ನು ರಾಜ್ಯ ಸರಕಾರ ರದ್ದುಪಡಿಸಬೇಕು ಎಂದು ಭೋವಿ(ವಡ್ಡರ) ಸೇವಾ ಸಂಘ ಹಾಗೂ ಮಾಂಗ ಗಾರುಡಿ ಸಮಾಜದವರು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ. 

ಪ್ರತಿಭಟನೆಯಲ್ಲಿ ಶಿವಾಜಿ ಗಾಡಿವಡ್ಡರ, ದುರ್ಗಪ್ಪಾ ಬಡಸಕರ, ಶಂಕರ ಗಾಡಿವಡ್ಡರ, ರಾಜು ಬೆಳಗಾಂವಕರ, ಹನುಮಂತ ಗಾಡಿವಡ್ಡರ, ತೇಜಾ ಪವಾರ, ಅಂಜು ಬಳ್ಳಾರಿ ಮತ್ತಿತರರು ಭಾಗವಹಿಸಿದ್ದರು. 


ಬೆಳಗಾವಿ ವರದಿ.  21 ಜುಲೈ 2014. ವಿಜಯಕರ್ನಾಟಕ. 

ಸದಾಶಿವ ಆಯೋಗ & ಲಂಬಾಣಿ ಜನಾಂಗ

ಸಮೂಹ ಸಂಘಟನೆ ಇಲ್ಲದಿದ್ದರೆ ವೈಯಕ್ತಿಕ ಹಾಗೂ ಸಾಮೂಹಿಕ ಪ್ರಗತಿ ಹಾಗೂ ಕಲ್ಯಾಣ ಅಸಾಧ್ಯ.
ಸದಾಶಿವ ಆಯೋಗ & ಲಂಬಾಣಿ ಜನಾಂಗ
ಚೋಳರಾಜ್ ನಾಯ್ಕ್, ಬಳ್ಳಾರಿ.
ಲಂಬಾಣಿ ಜನಾಂಗ:-  ಕರ್ನಾಟಕ ರಾಜ್ಯದಲ್ಲಿ ಲಂಬಾಣಿ (ನಾವು) ಜನಾಂಗದ ಜನಸಂಖ್ಯೆ ಸುಮಾರು 35-40 ಲಕ್ಷಕ್ಕೂ ಹೆಚ್ಚಿದೆ. ಲಂಬಾಣಿ (ನಾವು)ಗಳು ಒಂದು ಬುಡಕಟ್ಟು ಜನಾಂಗದವರುರಾಷ್ಟ್ರಮಟ್ಟದಲ್ಲಿ ನಮ್ಮನ್ನು ಬಂಜಾರಿ (ಬಂಜಾರ) ಗಳೆಂದು ಕರೆಯುತ್ತಾರೆ. ನಾವು ನಮ್ಮದೇ ಆದ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ, ನಂಬಿಕೆಗಳು, ಪದ್ಧತಿಗಳು, ಸಂಪ್ರದಾಯಗಳು, ಸಾಹಿತ್ಯ, ಸಂಗೀತ, ನೃತ್ಯಕಲೆ, ಕುಶಲಕಲೆ ಮುಂತಾದ ಅಂಶಗಳಿಂದ ಇತರರಿಂದ  ಭಿನ್ನವಾಗಿರುತ್ತೇವೆನಮ್ಮ ಪೂರ್ವಜರು ನದಿ, ಕೆರೆ, ಕಟ್ಟೆ ಮುಂತಾದ ನೀರಿನ ಮೂಲದ ಹತ್ತಿರ ತಮ್ಮದೇ ಆದ ಜನವಸತಿಗಳನ್ನು ಕಟ್ಟಿಕೊಂಡು ಬದುಕಿದ್ದಾರೆ, ಅವು ಇಂದು ತಾಂಡಗಳಾಗಿವೆ.  ನಾವು ಮತ್ತು ನಮ್ಮ ಪೂರ್ವಜರು ಅರಣ್ಯ ಉತ್ಪಾದನೆಗಳನ್ನು (ಕಟ್ಟಿಗೆ, ಬೀಜ, ಎಲೆ) ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದವೆ.  ನಂತರದ  ದಿನಗಳಲ್ಲಿ  ಕೃಷಿ  ಕಲಿತಿದ್ದೇವೆಬಡತನ, ಅನಕ್ಷರತೆ, ತಿಳುವಳಿಕೆಯ ಕೊರತೆ, ಸೂಕ್ತ ಮಾರ್ಗದರ್ಶನದ ಕೊರತೆ, ಇವುಗಳು ನಮಗೆ ಕೇಳದೇ ದೇವರು ಕೊಟ್ಟ ವರಗಳು. ಈ ವರಗಳಿಂದಾಗಿ  ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಆಡಳಿತ ಮುಂತಾದ ಕ್ಷೇತ್ರಗಳಲ್ಲಿ ತುಂಬಾ ಹಿಂದುಳಿಯುವ ಹಾಗಿದೆ.
ಕರ್ನಾಟಕದಲ್ಲಿ ತಾಂಡ ಹಾಗೂ ಲಂಬಾಣಿ ಜನಾಂಗದ ಸ್ಥಿತಿಗತಿ:-
·         ಪ್ರಸ್ತುತ ನಮ್ಮ ತಾಂಡಗಳಲ್ಲಿ ಅಕ್ಷರಸ್ಥರ ಸಂಖ್ಯೆ ತುಂಬಾ ಕಡಿಮೆ. ಇದಕ್ಕೆ ಕಾರಣ ನಮ್ಮಲ್ಲಿರುವ ಬಡತನ.
·          ನಮ್ಮ ತಾಂಡಗಳಲ್ಲಿ ಮನೆಯ ಕುಟುಂಬದ ಸದಸ್ಯರಲ್ಲಿ ಕೇವಲ ಒಬ್ಬರು-ಇಬ್ಬರು ಮಾತ್ರ ಅಕ್ಷರಸ್ಥರು, ಉಳಿದವರು ಕೃಷಿಕಾರ್ಮಿಕರು.
·         ಲಂಬಾಣಿ ಜನಾಂಗದಲ್ಲಿ ಒಪ್ಪತ್ತಿನ ಗಂಜಿಗಾಗಿ ಮಕ್ಕಳನ್ನು ಮಾರಾಟ ಮಾಡುವಂತಹ ಪದ್ದತಿ ಇನ್ನೂ ಜೀವಂತವಾಗಿದೆ.
·         ಕೂಲಿಗಾಗಿ ಪರಸ್ಥಳಗಳಿಗೆ ಗುಳೆ ಹೋಗುತ್ತಿರುವುದು
·          ಸರ್ಕಾರದ ಯೋಜನೆಯ ವಿವರಗಳು ಗೊತ್ತಿಲ್ಲ & ಬ್ಯಾಂಕ್ ಗಳಿಂದ ದೊರೆಯುವ ಸೌಲಭ್ಯಗಳ ಮಾಹಿತಿಯಿಲ್ಲ.
·         ಸೂಕ್ತ ಹಾಗೂ ಆಧುನಿಕ ಕೃಷಿ ಪದ್ದತಿಯ ಅರಿವಿಲ್ಲ.  
·         ರೈತರ ಸಮಸ್ಯೆ ಗಳು & ಆತ್ಮಹತ್ಯೆಗಳು.
·         ಮಹಿಳೆಯರ ಸಾಕ್ಷರತೆ ತುಂಬಾ ಕಡಿಮೆ.  
·         ಹೆಚ್ಚಿನವರು ಮಧ್ಯ ವಯಸ್ಕರು, ಪುರುಷರು, ಅನಕ್ಷರಸ್ಥರು, ರೈತರು, ಪ್ರತಿ ಕುಟುಂಬದಲ್ಲಿ ಒಬ್ಬ ಇಲ್ಲವೆ ಇಬ್ಬರು ದುಡಿಯುವ ವ್ಯಕ್ತಿಗಳನ್ನು ಹೊಂದಿದ್ದಾರೆ.  
·         ತಾಂಡದಲ್ಲಿ ಕೇವಲ 100 ರಲ್ಲಿ 30 ಜನ ಮಾತ್ರ ಅಲ್ಪ ಪ್ರಮಾಣದ ಸ್ವಂತ ಭೂಮಿಯನ್ನು ಹೊಂದಿದ್ದು, ಉಳಿದವರು ಗುತ್ತಿಗೆ ಆಧಾರದಲ್ಲಿ  ಸಾಗುವಳಿ ಮಾಡುತ್ತಿದ್ದಾರೆ. 
·         ಇಂದಿಗೂ ತಾಂಡಗಳಲ್ಲಿ ಸಾರಿಗೆಗಾಗಿ  & ಕೃಷಿಗಾಗಿ ರೈತರು ಎತ್ತು-ಗಾಡಿಗಳನ್ನು ಅವಲಂಬಿಸಿದ್ದಾರೆ.
·         ಉಳಿತಾಯ ಮಾಡುವ ಹವ್ಯಾಸವಿಲ್ಲ. ಜೀವವಿಮೆಯಂತು ತುಂಬಾ ದೂರದ ಮಾತು.    
·         ತಾಂಡಗಳಲ್ಲಿ ಮಣ್ಣಿನ ಮನೆಗಳು, ಷೀಟ್ ಮನೆಗಳು, ಹಂಚಿನ ಮನೆಗಳು ಜಾಸ್ತಿಯಾಗಿವೆ.
·         ಶೌಚಾಲಯಕ್ಕಾಗಿ ಹಾಗೂ ತಮ್ಮ ನೈಸರ್ಗಿಕ ಅವಶ್ಯಕತೆಗಳಿಗೆ ತಾಂಡಾಗಳ ಸುತ್ತಮುತ್ತಲಿರುವ ಬಯಲನ್ನೇ ಉಪಯೋಗಿಸುತ್ತಾರೆ.
  • ಮನೆಗಳಲ್ಲಿ ವಿದ್ಯುಚ್ಛಕ್ತಿಯನ್ನು ಹೊಂದಿದ್ದಾರೆ. ಇದರಲ್ಲಿ ಭಾಗ್ಯಜ್ಯೋತಿ  ಗಳು ಹೆಚ್ಚಾಗಿವೆ. ಮನೆಗಳಲ್ಲಿ ಗಾಳಿ ಬೆಳಕು ಸರಿಯಾಗಿಲ್ಲ. ಟಿ.ವಿ, ರೇಡಿಯೋಗಳಿಲ್ಲದ ಮನೆಗಳು ಕೂಡ ನಮ್ಮ ತಾಂಡಗಳಲ್ಲಿ ಸಿಗುತ್ತವೆ.
  • ಎಲ್ಲಾ ತಾಂಡಗಳಲ್ಲಿಯೂ ಒಂದಲ್ಲಾ ಒಂದು ನೀರಿನ ಮೂಲ ಇದೆ. ಆದರೆ ಸ್ವಚ್ಛವಾದ ನೀರು ಯಾವ ತಾಂಡದಲ್ಲೂ ಸಿಗುತ್ತಿಲ್ಲ.
·         ಹುಡುಗಿಯರು ಋತುಮತಿಯಾದರೆ ಅವರನ್ನು ಮೂರು ದಿನ ಬೇರೆ ಮನೆಯಲ್ಲಿ (ಒಂದು ಮೂಲೆಯಲ್ಲಿ) ಕೂಡಿಸುವ ಅನಿಷ್ಟ ಪದ್ದತಿಗಳು ಚಾಲ್ತಿಯಲ್ಲಿವೆ.
·         ತಾಂಡಗಳಲ್ಲಿ ಶಿಶು ಮರಣ ದರ ಹೆಚ್ಚಳ .
·         ಬಾಣಂತಿಯರಿಗೆ ಪೌಷ್ಟಿಕಾಂಶದ ಕೊರತೆ. 
ಸದಾಶಿವ ಆಯೋಗದ ವರದಿ ಜಾರಿಯಾದರೆ  ನಮಗೆ ಉಂಟಾಗುವ ನಷ್ಟ, ಸಮಸ್ಯೆ ಮತ್ತು ಅವಮಾನ.
·          ನಾವು ಸಾಮಾಜಿಕವಾಗಿ ಸುಧಾರಿಸಲು ಪ್ರಯತ್ನ ಪಡುತ್ತಿರುವಾಗ, ನಮ್ಮ ಜನಾಂಗವನ್ನು ಪ್ರೋತ್ಸಾಹಿಸಬೇಕಾದ ಸರ್ಕಾರವು, ನಮಗೆ ಸಿಗಬೇಕಾದ ಸೌಲಭ್ಯಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಈಗೀಗ ನಾವು ನಮ್ಮ ಸುಧಾರಣೆಯ ಒಂದೆರೆಡು ಮೆಟ್ಟಿಲುಗಳನ್ನು ಹತ್ತುತ್ತಿರುವಾಗ, ಆ ಮೆಟ್ಟಿಲುಗಳಿಂದ ಕೆಳಗೆ ಕಾಲೆಳಿಯಲು ಪ್ರಯತ್ನ ಮಾಡುತ್ತಿದ್ದಾರೆ.  ಒಂದು ವೇಳೆ ನಮ್ಮ ವಿರೋಧದ ನಡುವೆಯು ಸದಾಶಿವ ಆಯೋಗ ಜಾರಿಯಾದರೆ, ಈಗೀಗ ಬದಲಾವಣೆಯ ಹಾದಿಯನ್ನು ಕಾಣುತ್ತಿರುವ ತಾಂಡಗಳು ಹಾಗೂ ನಾವು ಮತ್ತೇ ಹಿಂದಿನ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ನಾವು ಈಗಾಗಲೆ ಎದುರಿಸಿ ಬಂದತಂಹ ಸಮಸ್ಯೆಗಳು ತುಂಬಾ ಕಷ್ಟಕರವಾದುದ್ದಾಗಿವೆ. ಈ ಸಮಸ್ಯೆಗಳು ನಮ್ಮ ಮುಂದಿನ ಪೀಳಿಗೆಯವರು ಅನುಭವಿಸಬೇಕಾ ? 
·           ನಮ್ಮ ತಾಂಡಗಳಲ್ಲಿನ ಸಾಕ್ಷರತೆ ಪ್ರಮಾಣ ಇಂದಿಗೂ ಅಷ್ಟಕ್ಕಷ್ಟೆ. ಇನ್ನೂ ಮಹಿಳಾ ಸಾಕ್ಷರತೆ ! ಅದನ್ನು ಕಲ್ಪನೆಯು ಮಾಡುವಹಾಗಿಲ್ಲ, ಹಾಗಿದೆ ನಮ್ಮ ತಾಂಡಗಳ ಸಾಕ್ಷರತೆ.   ಇಂತಹ ಸಂದರ್ಭದಲ್ಲಿ  ಈಗೀಗ ನಮ್ಮ ಸಹೋದರರು ಹಾಗೂ ಸಹೋದರಿಯರು ಕಾಲೇಜು ಮೆಟ್ಟಿಲುಗಳನ್ನು ಹತ್ತುತ್ತಿರುವ ಹಂತದಲ್ಲಿ, ಅವರ ಹಾಗೂ ನಮ್ಮ  ಏಳಿಗೆಯನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಮಗೆ ಯಾಕೆ ಅನಿಸುತ್ತಿಲ್ಲ?  ನಮ್ಮ ಜನಾಂಗದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಎಷ್ಟಿದೆ?  ಸರ್ಕಾರದಲ್ಲಿ ಉನ್ನತ ದರ್ಜೆಯ ಉದ್ಯೋಗ ಪಡೆದವರ ಸಂಖ್ಯೆ ಎಷ್ಟಿದೆ?  ಶಿಕ್ಷಣ & ಉದ್ಯೋಗದಲ್ಲಿ ನಮ್ಮ ಮಹಿಳೆಯರ ಸಂಖ್ಯೆ ಎಷ್ಟಿದೆ? ನಮ್ಮಲ್ಲಿ ಎಷ್ಟು ಜನ ಮೆಡಿಕಲ್, ಇಂಜಿನಿಯರಿಂಗ್ ಓದುತ್ತಿದ್ದಾರೆ?  ನಾವು ಅಭಿವೃದ್ದಿ ಹೊಂದಿದ್ದೇವೆ ಅಂತ ನಮಗೆ ಯಾವಾಗಾದರೂ ಅನಿಸಿದೇಯೆ?  ಈಗ ನಾವು ಪರಿಶಿಷ್ಟ ಜಾತಿಯ ಸೌಲಭ್ಯವನ್ನು ಪಡೆಯುತ್ತಿರುವಾಗಲೇ ನಾವು ಇಷ್ಟೋಂದು ಹಿಂದುಳಿದಿರುವಾಗ, ಪರಿಶಿಷ್ಟ ಜಾತಿಯಲ್ಲಿನ ಸೌಲಭ್ಯ ಪಡೆಯದೇ ನಾವು ಹಾಗೂ ನಮ್ಮ ತಾಂಡಗಳು ಅಭಿವೃದ್ಧಿ ಹೊಂದಲು ಸಾಧ್ಯವೆ ಇಲ್ಲ.
·          ಇನ್ನೂ ನಾವು ಆರ್ಥಿಕವಾಗಿ ಗಮನಿಸಿದಾಗ, ನಮ್ಮ ತಾಂಡಗಳಲ್ಲಿ ಜನ ಹೆಚ್ಚಾಗಿ ಕಂಡುಬರುವುದು ಯಾವುದಾದರು ಹಬ್ಬ ಹರಿದಿನಗಳಲ್ಲಿ. ಯಾಕೆಂದರೆ, ಉಳಿದ ಅವಧಿಗಳಲ್ಲಿ ಅವರು ಕೂಲಿಗಾಗಿ ಗುಳೆ ಹೋಗುವುದು ಸಾಮಾನ್ಯ ವಾಗಿದೆ. ಹಾಗಾಗಿ ಇಂದಿನ ತಾಂಡಗಳಲ್ಲಿ ಹೆಚ್ಚಾಗಿ ಮುದುಕರು & ಮಕ್ಕಳನ್ನು ಹೊರತು ಪಡಿಸಿದರೆ ಯಾರು ಸಿಗುವುದಿಲ್ಲ. ಒಪ್ಪತ್ತಿನ ಗಂಜಿಗಾಗಿ ಹಸುಗೂಸುಗಳನ್ನು ಮಾರಾಟ ಮಾಡುವುದು.    ಇದರಿಂದ ತಿಳಿಯುತ್ತದೆ ನಾವು & ನಮ್ಮ ತಾಂಡಗಳು ಆರ್ಥಿಕವಾಗಿ ಎಷ್ಟರಮಟ್ಟಿಗೆ ಸಧೃಡರಾಗಿದ್ದಿವಿ ಎಂದು.  ಹೀಗಾಗಿ ಮುಂದಿನ ದಿನಗಳಲ್ಲಿ ನಾವು ಸಮಾಜ ಕಲ್ಯಾಣ ಇಲಾಖೆಯ ಸೌಲಭ್ಯಗಳು. SC/ST ನಿಗಮದ ಸೌಲಭ್ಯಗಳು, ಅಂಬೇಡ್ಕರ್ ನಿಗಮದ ಸೌಲಭ್ಯಗಳನ್ನು ಕಳೆದು ಕೊಂಡರೆ, ನಾವು ಆರ್ಥಿಕವಾಗಿ ಮುಂದೆಬರುವುದು ತುಂಬಾ ಕಷ್ಟವಾಗುತ್ತದೆ.  
ನಾವು ಮಾಡಬೇಕಾದ ಕಾರ್ಯಗಳು.
·         ನಮ್ಮ ಜನಾಂಗದ ಪ್ರತಿಯೊಬ್ಬ ವ್ಯಕ್ತಿ, ವಿದ್ಯಾರ್ಥಿಗಳು, ವಿದ್ಯಾವಂತರು,  ಕಾರಬಾರಿಗಳು, ನಾಯಕ್ ಗಳು, ಮುಖಂಡರು, ಸಂಘಟನೆಗಳು, ಸ್ವಾಮಿಜಿಗಳು, ಸಾಮಾಜಿಕ ಕಾರ್ಯಕರ್ತರು,  ಅಧಿಕಾರಿಗಳು, ರಾಜಕಾರಣಿಗಳು, ತಾಂಡದ ಜನಾಂಗೀಯ ನಾಯಕರು, ಯುವಕ ಸಂಘದ ಮುಂದಾಳುಗಳು,ಪ್ರತಿಯೊಬ್ಬರು ಇದರ ಬಗ್ಗೆ ಶ್ರಮಿಸಬೇಕು.
·          ಎಲ್ಲಾ ತಾಂಡಾಗಳಲ್ಲಿರುವ ನಾಯಕ್, ಕಾರಭಾರಿ, ಡಾವೊ, ಢಾವಸಾನಗಳ ಮೂಲಕ ಸದಾಶಿವ ಆಯೋಗ ವರದಿಯ ವಿರುದ್ದ ಜಾಗೃತಿ ಮೂಡಿಸುವಂತೆ ಕಾರ್ಯಕೈಗೊಳ್ಳಬೇಕು.
·         ಸ್ಥಳಿಯ ಮುಖಂಡರು ತಮ್ಮ ತಮ್ಮ ಗ್ರಾಮ / ಪಂಚಾಯಿತಿ  ಮಟ್ಟದಲ್ಲಿ ನಮ್ಮ ಜನಾಂಗದವರಲ್ಲಿ ಆಯೋಗದ ಶಿಫಾರಸ್ಸುಗಳು ಹಾಗೂ ಈಗ ಆಗುತ್ತಿರುವ ಬೆಳವಣಿಗೆಗಳನ್ನ, ನಾವು ಈಗ ಎಚ್ಚರವಾಗದೇ ಇದ್ದರೆ ಮುಂದಾಗುವ ಪರಿಣಾಮದ ಬಗ್ಗೆ ತಿಳಿಸಬೇಕು.
·         ರಾಜ್ಯಮಟ್ಟದ ಸಮಾವೇಶದ ಕರೆಕೊಟ್ಟಾಗ ಪ್ರತಿಯೊಬ್ಬರು ಕೂಡ ಭಾಗಿಯಾಗಿ ನಮ್ಮ ಬಲವನ್ನು ಹಾಗು ಒಗ್ಗಟ್ಟನ್ನು ಪ್ರದರ್ಶಿಸಬೇಕು.
·         ಜನಾಂಗಕ್ಕೆ ಸಂಬಂದಿಸಿದಂತೆ ಒಂದು ನಿರ್ಧಿಷ್ಟ website ಅನ್ನು ರಚನೆಮಾಡಿ, ಮಾದ್ಯಮಗಳ ಮೂಲಕ ಪ್ರಚಾರಮಾಡಿ, ರಾಜ್ಯದ ಪ್ರತಿಯೊಬ್ಬ ಗೋರ್ಮಾಟಿಯು ಸಂಪರ್ಕದಲ್ಲಿರುವಂತೆ ಮನವಿಮಾಡುವುದು, ಹಾಗೂ ಅವರ ಸಲಹೆಗಳು ಮಾರ್ಗದರ್ಶನಗಳನ್ನು ಪಡೆಯುವುದು. ಆಯೋಗದ ವಿರುದ್ದ ಕರೆಕೊಟ್ಟಾಗಾ ಅಸಂಖ್ಯಾತ ಸಂಖ್ಯೆಯಲ್ಲಿ ಭಾಗವಹಿಸುವುದು.  
ನಮ್ಮ ತಾಂಡದ ಪ್ರಮುಖ ದೇವಸ್ಥಾನಗಳಲ್ಲಿ (ಸೇವಲಾಲ್ & ಮರಿಯಮ್ಮ ದೇವಿ) ಆಯೋಗದ ಬಗ್ಗೆ ತಿಳುವಳಿಕೆ ನೀಡಲು ಬಿತ್ತಿಪತ್ರಗಳನ್ನು ಅಂಟಿಸುವುದು.

ನ್ಯಾ. ಎ.ಜೆ. ಸದಾಶಿವ ಆಯೋಗ ವು  ದಿನಾಂಕ:- 2005 ಸೆ.25ರಂದು. ಎನ್. ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಚನೆಯಾಗಿದ್ದು , ನ್ಯಾ. .ಜೆ. ಸದಾಶಿವ ನೇತೃತ್ವದಲ್ಲಿ ವಿಚಾರಣೆ ಆಯೋಗ ರಚಿಸಿದ್ದ ರಾಜ್ಯ  ಸರಕಾರ, 'ಕರ್ನಾಟಕದ ಪರಿಶಿಷ್ಟ ಜಾತಿಗಳಿಗೆ ಸಾಂವಿಧಾನಿಕ ಸೌಲಭ್ಯ ಹಾಗೂ ಅವುಗಳ ಹಂಚಿಕೆಯಲ್ಲಿ ಆಗಿರುವ ತಾರತಮ್ಯ ಪರಿಶೀಲನೆ' ನಡೆಸಿ ವರದಿ ಸಲ್ಲಿಸುವ ಹೊಣೆ ಒಪ್ಪಿಸಿತ್ತು.
2005 ರಲ್ಲಿ ರಚನೆಯಾಗಿದ್ದ ಆಯೋಗವು ತನ್ನ ವರದಿ ಸಲ್ಲಿಸಿದ್ದು 2012 ರಲ್ಲಿ. ಸದಾನಂದಗೌಡ ರು ಮುಖ್ಯಮಂತ್ರಿಯಾಗಿದ್ದಾಗ.  ಹಾಗಾದರೆ ಈ ಆಯೋಗ 7ವರ್ಷಗಳ ಕಾಲ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿತೆ?  ಖಂಡಿತ ಇಲ್ಲ.
2005 ರಲ್ಲಿ ಆಯೋಗವನ್ನು ರಚನೆಮಾಡಿದ ಸರ್ಕಾರ,  ಹಣವನ್ನು ಬಿಡುಗಡೆ ಮಾಡಿದ್ದು 2010ರ ಕೊನೆಯಲ್ಲಿ.  2010 ರ ಕೊನೆಯಲ್ಲಿ ಹಣ ಬಿಡುಗಡೆಯಾದಾಗ ತರಾತುರಿಯಲ್ಲಿ ಸಮೀಕ್ಷೆ ನಡೆಸಿ, ವರದಿ ಸಿದ್ದಪಡಿಸಿ ನೀಡಿದ ಶಿಫಾರಸ್ಸುಗಳೆಂದರೆ…..
·         ಪರಿಶಿಷ್ಟ ಜಾತಿಯ 101 ಉಪಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಶೇ.15ರಷ್ಟು ಮೀಸಲನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುವಂತೆ ನ್ಯಾ. ಸದಾಶಿವ ಆಯೋಗವು ಸರಕಾರಕ್ಕೆ ಶಿಫಾರಸು ಮಾಡಿದೆ.
·         ಪರಿಶಿಷ್ಟ ಜಾತಿ ಸಮುದಾಯಕ್ಕೆ ಶೇ.15ರಷ್ಟಿರುವ ಮೀಸಲು ಹಾಗೂ ಸರಕಾರಿ ಸೌಲಭ್ಯವನ್ನು ಜನಸಂಖ್ಯೆಗೆ ಆಧಾರವಾಗಿ ಹಂಚಿಕೆ ಮಾಡಬೇಕು.
·         ಶೇ.33.4ರಷ್ಟಿರುವ ಎಡಗೈ (ಮಾದಿಗರು)  ಸಮುದಾಯಕ್ಕೆ ಶೇ.6,   ಶೇ.32ರಷ್ಟಿರುವ ಬಲಗೈ (ಹೊಲೆಯರು) ಸಮುದಾಯಕ್ಕೆ ಶೇ.5,  ಶೇ.23.64ರಷ್ಟಿರುವ 'ಸ್ಪೃಶ್ಯ ಪರಿಶಿಷ್ಟ'ರಿಗೆ ಶೇ.3,(ಲಂಬಾಣಿ. ಕೊರಮ, ಕೊರಚ, ಭೋವಿ, ಭಜಂತ್ರಿ ) ಶೇ.4.65ರಷ್ಟಿರುವ ಇತರೆ ಪರಿಶಿಷ್ಟರಿಗೆ  ಶೇ.1ರಷ್ಟು ಮೀಸಲು ಕಲ್ಪಿಸಬಹುದು.
·         ದಲಿತರಲ್ಲಿ ಅತ್ಯಂತ ದಯನೀಯವಾಗಿ ಬದುಕುತ್ತಿರುವವರು ಇದ್ದಾರೆ. ಎಲ್ಲರನ್ನೂ ಒಂದೇ ಚೌಕಟ್ಟಿನಲ್ಲಿ ನೋಡುವುದಕ್ಕಿಂತ ಆರ್ಥಿಕ, ಸಾಮಾಜಿಕ ಸ್ಥಿತಿಗೆ ಅನುಗುಣವಾಗಿ ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಒಳಮೀಸಲು ಕಲ್ಪಿಸಬೇಕು.
ಮಂಡಲ್, ವೆಂಕಟಸ್ವಾಮಿ ವರದಿ ಬಳಿಕ ಪರಿಶಿಷ್ಟ ಸಮುದಾಯದ ಬಗ್ಗೆ ವರದಿ ನೀಡಿದ ಸದಾಶಿವ ಆಯೋಗ.
ಒಳಮೀಸಲು ವಿಂಗಡಿಸಿ ರಾಜ್ಯ ಸರಕಾರ ಇದನ್ನು ಜಾರಿ ಮಾಡಿದರೆ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅಸಿಂಧುವಾಗುತ್ತದೆ. ಹಾಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು  ಎಂದು ನ್ಯಾ. ಎ.ಜೆ. ಸದಾಶಿವ ರವರು ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ. 
 ಈ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡದಿರುವ ಹಾಗೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

 
                                                                          ಚೋಳರಾಜ್ ನಾಯ್ಕ್, ಬಳ್ಳಾರಿ.

                                                                                                   9886518398.